Tuesday, 18 August 2020

ಗೀತಳ ಗೀಚು



1.) ಬದುಕು ಬಣ್ಣಗಳಲ್ಲಿ....


2)ಕಲೆಗೆ ದೃಷ್ಟಿಯ ಪರಿವೆಯಿಲ್ಲ

ಅದು ದೃಷ್ಟಿಕೋನ ! 


3.)ಆಯಾಮದ ಅನುಮಾನ ಅನುಭೂತಿಗೇಕೆ ?


4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲಿತ್ತು

ನನಗೆ ಮಾತ್ರ ಅಂಕುಡೊಂಕಿನ ಸಾಲು ನೆಚ್ಚಿತು !


5.)ಪರಿಸರವಷ್ಟೇ ಸಮತೋಲನ, ಮಿಕ್ಕಿದ್ದೆಲ್ಲ ಆಂದೋಲನ.


6.)ಪಾತರಗಿತ್ತಿಯ ಪುಕ್ಕ ಹತ್ತಿದ ಪರಿವೆಗೆ ರೂಪಾಂತರದ ರೋಮಾಂಚನ


7.)ಜಟಿಲತೆಯ ಪಥದಲ್ಲಿ ಪುಟಿದೆದ್ದ ಚಿಟಿಕೆ ಕಿಡಿ

ಮತ್ತೆ ಚಡಪಡಿಸಿದಂತೆ!


8.)ಪರಿಸರದ ಸಮೀಕರಣಕ್ಕೆ ಪ್ರಮೇಯ ಬೇಕೆ ?


 9.)ಕಾಫಿಯ ಕೆನೆಯಲ್ಲಿ ಕಾಪಿಟ್ಟ ಕವಿತೆ ಕಹಿಯಾದರೂ, ಕಲೆಯೇ! 


10.)ಯಜ್ಞಕ್ಕೆ ಹವಿಸ್ಸಿದ್ದಂತೆ ಪ್ರಜ್ಞೆಗೆ ಪ್ರಾಣಾಯಾಮ


©️Geethalakshmi Kochi

Wednesday, 24 June 2020

ನೆನಪುಗಳ ತೂಗುಯ್ಯಾಲೆ ತೂಗಿ...



ಬಾಲ್ಯದಿಂದ ಇಂದಿನ ವರೆಗೂ ಗೀತಳ ಅವಿಚಲಿತ ಅಥವಾ ಅಚಲ ಪ್ರೀತಿ ಎಂದರೆ ಉಯ್ಯಾಲೆ. ಯಾವುದೇ ಖುಷಿಗಳನ್ನು ಸಂಭ್ರಮಿಸುವುದಕ್ಕೆ ಅಥವಾ ದುಃಖವನ್ನು overcome ಮಾಡುವ ಪ್ರಯತ್ನಕ್ಕೆ , ಓದುವುದಕ್ಕೆ, ಚಿಂತಿಸುವುದಕ್ಕೆ ಇದಕ್ಕಿಂತ ನೆಚ್ಚಿನ ಜಾಗ ಇನ್ನೊಂದಿರಲಿಲ್ಲ.ಮೂರನೇ ತರಗತಿಯಲ್ಲಿ ಜೋಕಾಲಿಯಲ್ಲಿ ಕುಳಿತು ಬರೆದ ಕಾಪಿಯಲ್ಲಿ ಅಕ್ಷರ ದುಂಡು ದುಂಡಾಗಿಲ್ಲವೆಂಬ  ಕಾರಣಕ್ಕೆ rewrite this! ಎಂಬ ರಿಮಾರ್ಕ್ ಕೂಡ ಸಿಕ್ಕಿದೆ .

ಇಂಥಹಾ ಬಾಲ್ಯದ ಉಯ್ಯಾಲೆ ಎಂದರೆ ಅಂಗಡಿಯಿಂದ ತಂದದ್ದೇನೂ ಅಲ್ಲ. ಗೀತಳ ಕೊಠಡಿಯ ಹಿಂಭಾಗದ ಸೀತಾಫಲದ ಮರದ ಕೊಂಬೆಗೆ ಅವಳ ಅಮ್ಮನ ಹಳೆಯ ಸೀರೆಯಿಂದ ಅಪ್ಪ ಕಟ್ಟಿ ಕೊಟ್ಟದ್ದು. ಅವತ್ತೆ ಹೇಳಿದಂತೆ ಸಾಗುವಾನಿ ಮರ ಅವಳು ಮುದ್ದಿಸಿದಂಥದ್ದಾದರೆ , ಸೀತಾಫಲದ ಮರ ಅವಳನ್ನು ಮುದ್ದಿಸಿದ್ದು, ತೂಗಿದ್ದು, ಹಣ್ಣು ನೀಡಿದ್ದು.
....

ಇನ್ನು ಉಯ್ಯಾಲೆಯಲ್ಲಿ ಮಾಡಿದ ಕಸರತ್ತು ಅಂಥಿಂಥದ್ದಲ್ಲ. ನೆಲವನ್ನು ಮೆಟ್ಟುವ ರಭಸಕ್ಕೆ ಸುಮಾರು ಎದುರಿನ ರೆಂಬೆಗೆ ತಾಗುವಷ್ಟು ಮೇಲೆರುತ್ತಿತ್ತದು. ಪೂರ್ಣ ಮರವೇ ಅಲುಗಾಡುತ್ತಲು ಇತ್ತು.ಅದರ ಒಂದು ಭಾಗ ಮನೆಯ ಒಂದು ಭಾಗದ ಕಬ್ಬಿಣದ ಶೀಟ್ ಗೆ ತಾಗಿ ಶಬ್ದವೂ ಬರುತ್ತಿತ್ತು.
...
ಒಂದು ದಿನ ಆ ಜೋಕಾಲಿಯಲ್ಲಿ ಉಲ್ಟಾ ಮಲಗಿ ಗೀತಾ ಅದರಲ್ಲಿ ಸಿಕ್ಕಿ ಹಾಕಿಕೊಂಡದ್ದೂ ಇದೆ. ಉಸಿರೆಳೆಯಲು ಅಥವಾ ಯಾರನ್ನಾದರೂ ಕರೆಯಲು ಕೂಡ ಅವಳಿಗೆ ಅಂದು ಕಷ್ಟವಾಗಿತ್ತು. ಕೊನೆಗೆ ಅಮ್ಮ ಬಂದು ಬಿಡಿಸಿ ಜೋರು ಮಾಡಿದ್ದು ಕೂಡ ನಿಜ. ಇದರಿಂದ ಏನಾದರೂ ಉಪಯೋಗವೋ ಪ್ರಯೋಜನವೋ ಆಗಲಿಲ್ಲ ಎನ್ನುವಂಥದ್ದೂ ಅಷ್ಟೇ ನಿಜ.
ಶಾಲೆಯಿಂದ ಬಂದ ನಂತರ, ಶಾಲೆಗೆ ಹೋಗುವ ಮೊದಲು ಎಲ್ಲವೂ ಅವಳು ಸಾಧಾರಣ ಉಯ್ಯಾಲೆ ತೂಗುತ್ತಲೇ ಇರುತ್ತಿದ್ದಂಥವಳವಳು.ಇದಕ್ಕಾಗಿಯೇ ಓಡೋಡಿ ಶಾಲೆಯಿಂದ ಬಂದದ್ದೂ ಇದೆ. ಬೆಳಗ್ಗೆ ಬೇಗ ಏಳಲು ಒಂದು ಕಾರಣ ಇದೂ ಆಗಿತ್ತು.ಅಷ್ಟೇ ಏಕೆ , ಕಲೋತ್ಸವಗಳಂಥ ಸ್ಪರ್ಧೆಗಳಿಗೆ ತಯಾರಿ ಅಂದ್ರೆ ಹಾಡು, ಕಥೆ ಹೇಳುವುದು ,ಭಾಷಣಗಳ ತಯಾರಿಯಿಂದ ಪರೀಕ್ಷೆಗೆ ಓದುವ ಜಾಗವೂ ಇದೇ ಆಗಿತ್ತು.
Coolest work place ever ಅಲ್ವಾ?
...
ಈ ಉಯ್ಯಾಲೆ , ಮರ ಮತ್ತು ಸುತ್ತಲ ಪ್ರದೇಶ ಒಂದು ರೀತಿ ಅವಳ ಅಧಿಪತ್ಯದ ಜಾಗವಾಗಿತ್ತು ಎಂದರೆ ತಪ್ಪಾಗಲಾರದು. ಅದರಲ್ಲಿ ಇನ್ಯಾರಿಗಾದರೂ ತೂಗುವ ಆಸೆ ಏನಾದರೂ ಇದ್ದರೂ ಗೀತಳ ಸಮ್ಮತಿ ಬೇಕಿತ್ತು, ಸಾಧಾರಣವಾಗಿ ಅವಳು ಇಂಥ ಅನುಮತಿ ಕೊಡುತ್ತಿರಲಿಲ್ಲ.ಕೊಟ್ಟರೂ ಹೆಚ್ಚು ಹೊತ್ತು ತೂಗುವ ಅವಕಾಶ ಯಾರಿಗೂ ಇರುತ್ತಿರಲಿಲ್ಲ.ಇದರ ಬಗ್ಗೆ ತೀರ ಪೊಸೆಸಿವ್ ಎನ್ನುವಂಥ ಮನೋಭಾವ.


........

ಆದರೆ ಸುಮಾರು ಅವಳು ಆರನೇ ತರಗತಿ ಮುಗಿಸಿ ಏಳು ಶುರುವಾಗುವಷ್ಟರಲ್ಲಿ ಮನೆಯ ನವೀಕರಣ ಮಾಡುವ ತೀರ್ಮಾನ ಮಾಡಲಾಯಿತು. ಇಂಥದ್ದರಲ್ಲಿ ನಾಲ್ಕರಿಂದ ಐದು ಹೊಸ ಕೊಠಡಿಯ ನಿರ್ಮಾಣ ಕ್ಕೂ ಸಿಧ್ಧತೆ ಮಾಡಲಾಗಿತ್ತು.
ಪ್ಲಾನ್ ನ ಪ್ರಕಾರ ಸೀತಾಫಲದ ಮರವನ್ನು ಕಡಿಯುವುದು ಅನಿವಾರ್ಯವಾಗಿತ್ತು.
....
ಗೀತಳಿಗೆ ದುಃಖವಿದ್ದದ್ದು ನಿಜ, ಆದರೆ ಹೊಸ ರೂಮ್ ಸಿಗುತ್ತದೆ ಎನ್ನುವ ಆಮಿಷವೂ ಇತ್ತು.ಮನಸ್ಸಿನಲ್ಲಿ ಬೇಕು ಬೇಡಗಳ ಗೊಂದಲಗಳ ನಡುವೆ ಕೊನೆಗೆ ಮನೆಯವರೆಲ್ಲರ ನಿರ್ಧಾರದಂತೆ ಅದನ್ನು ಕಡಿಯಲಾಯಿತು. ಮನೆಯ ನವೀಕರಣವನ್ನೂ ಪೂರ್ತಿ ಮಾಡಲಾಯಿತು
ಮೊದಮೊದಲು ಹೀಗೆ ಹೊಸತನದ ಹುರುಪಿದ್ದರೂ ಅವಳಿಗೆ ತೀರಾ ಹತ್ತಿರವಾದ , ನೆಚ್ಚಿನ ಉಯ್ಯಾಲೆ ಮತ್ತು ಮರ ಇಲ್ಲವಾದ ವಿಚಾರ ಅವಳನ್ನು ನಿತ್ಯ ಕಾಡತೊಡಗಿತ್ತು ಅಥವಾ ಇಂದಿಗೂ ಕಾಡುತ್ತಿದೆ.
.....
ಎಂಟನೆಗೆ ವಸತಿಶಾಲೆಗೆ ಸೇರಿದ ಬಳಿಕ ರಜೆಯಲ್ಲಿ ಮನೆಗೆ ತೆರಳುವಾಗಲೂ ಅಂಗಳದಲ್ಲಿ ಎಲ್ಲದಕ್ಕಿಂತ ಮೊದಲು ಕಾಣುತ್ತಿದ್ದ ಸೀತಾಫಲ ಮರವಿರುತ್ತಿರಲಿಲ್ಲ. ಬದಲಿಗೆ ಕಿಟಕಿಯೊಂದು ಕಾಣುತ್ತಿತ್ತು..ಅದೂ ಸಾಧಾರಣ ಅಂಗಳದ ಧೂಳು ಬರಬಾರದೆಂಬ ಕಾರಣಕ್ಕೆ ಮುಚ್ಚಿರುತ್ತಿತ್ತು.
.....
ಈಗ ಆ ಉಯ್ಯಾಲೆ ಮತ್ತು ಮರ ಇಲ್ಲವಾಗಿ ಸುಮಾರು 9 ವರ್ಷಗಳು ಕಳೆದಿವೆ. ಗೀತಾ ಮಹಾನಗರ ಸೇರಿದ್ದಾಳೆ.
 ಅವಳ ಅಕ್ಕನ ಮಗು ಮನೆಯಲ್ಲಿ ಉಯ್ಯಾಲೆ ತೂಗುತ್ತಾಳೆ. ಅದರಲ್ಲಿ ಮಿಕ್ಕಿ ಮೌಸ್ನ ಚಿತ್ರವೂ ಇದೆ. ಬಹುಶಃ ಅವಳೂ  ಅದನ್ನು ಪ್ರೀತಿಸುತ್ತಾಳೆ ಅನಿಸುತ್ತದೆ.ಗೀತಾ ಪಾರ್ಕ್ ಗಾರ್ಡನ್ಗಳ ಉಯ್ಯಾಲೆ ತೂಗಲು ಅಲ್ಲಿ ಆಡುವ ಮಕ್ಕಳಿಲ್ಲದ ಸಮಯ ಅಂದರೆ ಬೆಳಗ್ಗೆ ತೆರಳುತ್ತಾಳೆ.
.......


ಆದರೆ ಅಮ್ಮನ ಸೀರೆಯಿಂದ ಸೀತಾಫಲದ ಮರಕ್ಕೆ ಕಟ್ಟಿದ ಜೋಕಾಲಿಯ ಅನುಭೂತಿ ಇಲ್ಲ. ಅಂದ್ರೂ  ಉಯ್ಯಾಲೆ ಗೀತಾಳಿಗೆ ಇಂದಿಗೂ ಪ್ರಿಯ.
ಯಾಕಿರಬಹುದು ? ಯೋಚಿಸಿದೆ.
ಒಳಮನಸ್ಸು ಉಸುರಿದ್ದು ಇಂತಿದೆ:ತೂಗುಯ್ಯಾಲೆ ದೂರ ದಿಗಂತವನೇರಿಸಿದಂತೆ
ಜೀವನ ಜೀಕಿ ಧರೆಯನು ಮೀಟಿ ಆಗಸದ ಅಂಶ ನಾನಾದರೆ, ಭೂಮಿಯ ಬಯಕೆ
ನನಗೇಕೆ...ನನ್ನ ದೃಷ್ಟಿಯಲ್ಲಿ ಸೃಷ್ಟಿ ಸಾರ್ವಭೌಮವೇಕೆ! ದೃಷ್ಟಿಕೋನ ಬದಲಿಸಿ ದಾರ್ಶನಿಕತೆಗೆ ದೃಷ್ಟಾಂತ ಬರೆಯಬಹುದೇನೋ..ನೀಲಿಯಲಿ ನಿರಂತರ ತೇಲಬಹುದೇನೊ!
ಗೀತಳೂ ಹೀಗೆ ಯೋಚಿಸಿರಬಹುದು ,ಬಹುಶಃ ಉಯ್ಯಾಲೆಯೂ💟





-Geethalakshmi Kochi

Tuesday, 9 June 2020

Saga of ಸಾಗುವಾನಿ!

ಚಿತ್ರ ಕೃಪೆ : ಅಂತರ್ಜಾಲ

ನೇಪಥ್ಯಕ್ಕೆ ಸರಿದಿದ್ದ ಒಂದು ನೆನಪು ಇಂದು ಏಕಾಏಕಿ ನನ್ನ ಮನೆ ಮುಂದೆ , ಮನದ ಮುಂದೆ ಚಪ್ಪಲಿ ಕಳಚಿ ನಿಂತಂತಾಯಿತು.
ಈ ನೆನಪು ಐದು ವರ್ಷದ ಗೀತಳ  ಕನಸು. ಗೀಚದೆ ಉಳಿದದ್ದು.
.
ಕೃಷಿ ಕುಟುಂಬದ ಕುಡಿಯಾಗಿ ಬೆಳೆದ ಅಥವಾ ಬೆಳೆಯುತ್ತಿದ್ದ ಗೀತಳಿಗೆ ಗಿಡಗಳನ್ನು ಬೆಳೆಸುವುದು, ಅವುಗಳ ಜೊತೆಗೆ ಮಾತನಾಡುವುದು, ಅವಳು ನೆಟ್ಟ ಹೂಗಿಡದ ಹೂ ದೇವರಿಗೆ ಅರ್ಪಿಸಲು ಅಜ್ಜ ಕೀಳುವಾಗ ಸಿಡುಕುವುದು ಹೇಗಿದ್ದರೂ ಸಹಜತೆಯೇ ಆಗಿತ್ತು.
.

ಹೀಗಿರುವಾಗ ಕೇರಳ ಸರ್ಕಾರ ಪ್ರತಿ ಸರಕಾರಿ ಶಾಲೆಯ ಮಕ್ಕಳಿಗೆ ಪರಿಸರ ದಿನಾಚರಣೆಯ ಪ್ರಯುಕ್ತ ಒಂದೊಂದು ಗಿಡದಂತೆ ವಿತರಿಸಿತು. ಹೀಗೆ ಗೀತಳ ಪಾಲಿಗೆ ಸೇರಿದ್ದು ಒಂದು ಸಾಗುವಾನಿ ಗಿಡ.ಗೆಳೆಯರಿಗೆ ಹೆಚ್ಚಿನವರಿಗೂ ಡಿಸೆಂಬರ್ ಫ್ಲವರ್!!! ಸಾಗುವಾನಿ ಗಿಡಕ್ಕೆ ಹೋಲಿಸಿದರೆ ಉದ್ದವೂ ಹೆಚ್ಚಾಗಿತ್ತು. ! ಅವರಿಗೆ ಬೇಗ ಹೂ ಸಿಗುವ ಆಶಯವೂ ಇತ್ತು. ಆದರೆ ಪುಟ್ಟ ಸಾಗುವಾನಿ ಎಲ್ಲದಕ್ಕಿಂತ ಮುದ್ದಾಗಿತ್ತು.ಇದನ್ನು ಬೆಳೆಸ ಬೇಕಿದ್ದರೆ ಸಾಧಾರಣವಾಗಿ ಮಕ್ಕಳಿಗಿರುವ ನಾಲ್ಕೈದು ತಿಂಗಳಲ್ಲಿ ಫಲ ಪಡೆಯುವ ಆಶಯ ಬಿಡಬೇಕಿತ್ತು. ಮತ್ತು ಯಾವುದೇ ರೀತಿಯ ಝಿಲ್ಮಿಲ್ ಕನಸುಗಳು ಇರಬಾರದಿತ್ತು.ಅಥವಾ ಇನ್ನೊಂದು ಆಯ್ಕೆಯಾಗಿ ಸೀದಾ ಅಪ್ಪನ ಕೈಯಲ್ಲಿಟ್ಟು ಜವಾಬ್ದಾರಿ ಮುಗಿಸಬಹುದಿತ್ತು.
.
ಆದರೆ ಗೀತಾ ಆ ಗಿಡದ ಮಡಿಲಾಗ ಬಯಸುತ್ತಾಳೆ. ಗೆಳತಿಯಾಗಲಿಚ್ಛಿಸುತ್ತಾಳೆ. Long-term ಅಂದರೇನು ಎಂದರಿಯದ ವಯಸ್ಸಿನಲ್ಲಿ ಈ ಗಿಡ ಮರವಾಗುವ ಕನಸು ಕಾಣುತ್ತಾಳೆ, ಮತ್ತು ಆ ಕನಸಿನ ಮನಸ್ಸು ಸಾಗುವಾನಿಗೆ ಸರಿಯಾದ ನೆಲೆ ಮತ್ತು ನೆಲ ಹುಡುಕುತ್ತದೆ.
ಅಂಥಿಂಥಾ ಜಾಗವಲ್ಲ..ಅಂಗಳದ ಹೂ ದೋಟದಲ್ಲಿ ನೆಡುವಂತಿಲ್ಲ, ಕಂಗಿನ ತೋಟದಲ್ಲಿ ನೆಟ್ಟರೆ ಮುಂದೆ ಬೆಳೆದಾಗ ಅಡಿಕೆ ಮರಗಳಿಗೆ ತಾಗಿ ಹಬ್ಬಿ ಉಪದ್ರವವಾಗಿಬಿಡಬಹುದು. ಇನ್ನು ಮನೆಯ ಮೇಲ್ಬಾಗದ ತೆಂಗಿನ ತೋಟದಲ್ಲಿ ನೆಟ್ಟರೆ ಅದರ ಮೇಲೆ ದೃಷ್ಟಿ ಇಡುವುದು ಹೇಗೆ...ಅಲ್ಲವೇ...?
.
ಕೊನೆಗೆ ಅದಾಗ ತಾನೆ  ಸೋಪಾನವಾಗಿ ಪರಿವರ್ತಿಸಿದ ಒಂದು ಜಾಗವೇ ಈ ಗಿಡದ ನೆಲೆಯಾಗಲಿ ಎಂದು ತೀರ್ಮಾನವೂ ಆಯಿತು, ಮತ್ತು ಅದೇ ದಿನ ಜೋಪಾನವಾಗಿ ಅಪ್ಪ ಅಮ್ಮನ ಜೊತೆ ಗಿಡ ನೆಡಲಾಯಿತು. 
ಗಿಡ ಪುಟ್ಟದಾಗಿದೆ ಅಲ್ಲವೆ? ಆಗ ಅದರ ಮೇಲೆ ಮನೆ ಕೆಲಸದವರಾಗಲಿ , ಮಕ್ಕಳಾಗಲಿ ತಿಳಿಯದೆ ತುಳಿದು ಬಿಡಬಾರದು. ಹಾಗಾಗಿ ಅದರ ಸುತ್ತ ಉದ್ದುದ್ದದ ಕೋಲುಗಳನ್ನು ನೆಟ್ಟು ಒಂದು ಬೇಲಿಯನ್ನೂ ಕಟ್ಟಲಾಯಿತು.
.
ದಿನ ನಿತ್ಯದ ಜೀವನದ ಅಂಶವಾಗಿ ಗಿಡ ಬದಲಾದಾಗ ಇದೆಲ್ಲ ದಿನಚರಿಯ ಪುಟವನ್ನು ಸೇರತೊಡಗಿತು. ಸ್ವಪ್ನಾ ಟೀಚರ್ ಈ ದಿನಚರಿ ಅದೇ ಪ್ರೀತಿಯಿಂದ ಓದಿ #saga of ಸಾಗುವಾನಿಯ  ಭಾಗವಾಗದರು.

.

ಈ ಸಾಗುವಾನಿ ಗಿಡಕ್ಕೆ ಬೇರೇನೂ ಆರೈಕೆಯೂ ಬೇಕಿರಲಿಲ್ಲ.ಮಳೆಗಾಲವಾದ್ದರಿಂದ ಕನಿಷ್ಟ ಪಕ್ಷ ನೀರು ಕೂಡ ಅದಕ್ಕೆ ನೀಡುವ ಅಗತ್ಯ ನಮಗಿರಲಿಲ್ಲ. ಈಗಿನ ವರ್ತಮಾನ ಪರಿಸ್ಥತಿಯಲ್ಲಿ ಹೇಳುವುದಿದ್ದರೆ ಈ ಸಾಗುವಾನಿ ಗಿಡ ಆತ್ಮನಿರ್ಭರತೆಯ ಪ್ರತೀಕವಾದಂತಿತ್ತು. ಅಂದರೆ ಅದು ಯಾರಿಂದಲೂ ಏನನ್ನೂ ಬಯಸುತ್ತಲೇ ಇರಲಿಲ್ಲ. ಆದರೆ ಇದಕ್ಕಾಗಿ ಏನಾದರೂ ಮಾಡಲೆ ಬೇಕೆಂಬ ಅದಮ್ಯ ಆಸೆಯಾಗಿತ್ತು ಗೀತಳದು.
.
ಹೀಗಾಗಿ pampering the plant ಎಂದು ಅದಕ್ಕೆ ಗೊಬ್ಬರ ನೀಡಲಾಗುತ್ತಿತ್ತು. ದಿನ ನಿತ್ಯ ಮಾತನಾಡಲಾಗುತ್ತಿತ್ತು ಮತ್ತು ಶಾಲೆಯ ಕತೆಗಳನ್ನು ಕೇಳಿಸಲಾಗುತ್ತಿತ್ತು.ತನ್ನ ಕವಿತೆಗಳನ್ನು ಅದರ ಜೊತೆ ಹಂಚಲಾಗುತ್ತಿತ್ತು.
.

ಹೀಗೆ ಗಿಡದ ಪ್ರತಿ ಚಿಗುರಿಗೆ, ಎಲೆಯ ಸೌಂದರ್ಯಕ್ಕೆ , ಬೆಳೆಯುವ ಮೋಡಿಗೆ ಗೀತ ಕಣ್ಣಾದಳು, ನಗುವಾದಳು, ಸಂಭ್ರಮವಾದಳು.ಹುಳ ತಿಂದ ಎಲೆ ಕಂಡು ಆಗಾಗ ಅಳುವೂ ಆದಳು.ಅದರ ಜತನದ ಆಳಾದಳು.ಜೊತೆಗೆ ತಾನೂ ಬೆಳೆದಳು.ಆದರೆ ಗಿಡ ಬೆಳೆದು ಅವಳಿಗಿಂತ ಉದ್ದವಾಯಿತು. ಗೆಳೆಯರ ಹೂಗಿಡದ ಹೂ ಕಂಡರೂ ಈಗ ಗೀತಳಿಗೆ my tribe and vibe both are different ಅಂತ ತಿಳಿದಿತ್ತು.
.
ಗಿಡ ನಿರಂತರ ಬೆಳೆದು ಅವಳಿಗಿಂತ ಉದ್ದವಾದ ದಿನ ಅವಳಿಗಾದ ಸಂತಸ ಅಷ್ಟಿಷ್ಟಲ್ಲ.
ಹೀಗೆ ಬೆಳೆದ ಗಿಡ ಗಾಳಿಗೆ ಬಗ್ಗುತ್ತಿತ್ತು, ಇದಕ್ಕಾಗಿ ಕೋಲೊಂದನ್ನು ಇದಕ್ಕೆ ಆಧಾರವಾಗಿ ಕೊಡಲಾಯಿತು. ಅಜ್ಜನ ಮನೆಗೆ ತೆರಳುವಾಗ ಗಿಡದ ಕಾಯುವಿಕೆಯ ಹೊಣೆ ಮನೆಯ ಅಜ್ಜನ ಹೆಗಲೇರುತ್ತಿತ್ತು.ಇದರೆಡೆಯಲ್ಲಿ ಆ ಸೋಪಾನದಲ್ಲಿ ಮತ್ತೆ ಅಡಿಕೆ ಗಿಡ ನೆಡುವ ಕುರಿತು ಮಾತುಕತೆ ನಡೆದಾಗ ಮಾಡಿದ ಚಿಂತನ ಮಂಥನವೆಷ್ಟೋ ಕಾಣೆ! ಆದರೂ ಸಾಗುವಾನಿಯ ಜಾಗ ಅದಕ್ಕಾಗಿ ಮೀಸಲಿಡುವಲ್ಲಿ ಗೀತಾ ಯಶಸ್ವಿಯಾಗಿದ್ದಳು.
.
ಹೀಗೆ ವರುಷಗಳುರುಳಿ ದೂರದ ರೆಸಿಡೆಂಶಿಯಲ್ ಸ್ಕೂಲ್ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಗೀತಾ ತೆರಳುವುದು ಖಚಿತವಾಯಿತು.ಮನೆ-ಮಂದಿಯನ್ನು ಬಿಟ್ಟು ಹೋಗುವಷ್ಟೆ ದುಃಖ ತನ್ನ ಏಳು ವರ್ಷಗಳ ಸಂಗಾತಿಯನ್ನು ಬಿಡುವಾಗಲೂ ಇತ್ತು.ಕೊನೆಗೆ ಹಲವು ಮಾತು-ಮೌನ-ಕಸಿವಿಸಿಗಳ ಬಳಿಕ ಅಲ್ಲಿಗೆ ತೆರಳುವಂತಾಯಿತು. ಗಿಡ ಒಂಟಿಯಾದಂತಿತ್ತು...ಗೀತಳೂ!
.
ಇಷ್ಟರಲ್ಲಿ ಮತ್ತೊಂದು ಮಳೆಗಾಲವೂ ಬಂತು, ಮಳೆ ಸುರಿಯಿತು,ಮತ್ತದೇ ರಭಸದ ಗಾಳಿ! ಗಿಡ ತುಂಬ ಉದ್ದ ಬೆಳೆದಿತ್ತಾದರೂ ಅಗಲದ ಕಾಂಡ ಅದಕಿರಲಿಲ್ಲ! ಅದು ಮರವಾಗಿರಲಿಲ್ಲ! ಈ ಬಾರಿ ಅಪ್ಪ ಮತ್ತು ಅಜ್ಜ ಕೊಟ್ಟ ಆಧಾರವೂ ಗಾಳಿಗೆ ಉಳಿಯಲಿಲ್ಲ. ಗಾಳಿಯ ರಭಸಕ್ಕೆ ಗಿಡ ಬಗ್ಗಿ ಮುರಿಯಿತು!
.
ಆ ಜುಲೈ ತಿಂಗಳ ಮೊದಲ ವಾರದಲ್ಲಿ ಶಾಲೆಯಿಂದ ಪರ್ಮೀಷನ್ ಕೇಳಿ ಗೀತ ಮನೆಗೆ ಬಂದಾಗ ಗಿಡವಿರಲಿಲ್ಲ. ಈಗ ಕನಸಷ್ಟೇ ಉಳಿದಿದೆ.. ಅದೂ ನೆನಪಾಗಿ.ತೂ ಕರಮ್ ಕರ್ ಫಲ್ ಕಿ ಚಿಂತಾ ನ ಕರ್  ಎಂಬುದು ಅವಳಿಗೆ ಅರಿವಾಯಿತು. ಮುನ್ನಡೆಯುವ ಬೆಳಕಾಯಿತು. ಬದುಕಿನ, ಬೆಳವಣಿಗೆಯ  ಗುಟ್ಟಾಯಿತು. ಈಗ ಅದೇ ಜಾಗದಲ್ಲಿ ಅಪ್ಪ ಮಾವಿನ ಸಸಿ ನೆಟ್ಟಿದ್ದಾರೆ.

ಆ ಮಳೆಗಾಲದಲ್ಲೂ ಬೇರೆ ಯಾರಿಗಾದರೂ ಸಾಗುವಾನಿ ಗಿಡ ಸಿಕ್ಕಿರಬಹುದೇನೊ.ಇದೇ ಪ್ರೀತಿ ಬೇರೆ ಯಾರಲ್ಲಾದರೂ ಮೊಳಕೆಯೊಡೆದಿರಬಹುದೇನೊ..ಗಿಡ ಮತ್ತು ಕನಸುಗಳೆರಡೂ ಬೆಳೆದಿರಬಹುದೇನೋ..ಮಾತಿಲ್ಲದ ಪ್ರೇಮ ಚಿಗುರಿರಬಹುದೇನೋ!
.
ಇನ್ನೂ ಪ್ರತಿ ಮಳೆಗಾಲ ಯಾರಿಗಾದರೂ ಸಾಗುವಾನಿ ಸಿಗಲಿ..ಈ saga ಹೀಗೆಯೇ ಮುಂದುವರಿಯಲಿ, ಗೀತಳ ಸಾಗುವಾನಿಯ ನೆಲೆ ನನ್ನ ನೆನಪಿನಲ್ಲೆಂದಿಗೂ ಇರಲಿ!!!
ಜೊತೆಗೆ ಇದಕೆಲ್ಲ ನೆಪ - ನಿಮಿತ್ತ -ಕಾರಣ ಪ್ರೀತಿಯಾಗಿರಲಿ💚💚


~Geethalakshmi Kochi

Wednesday, 6 May 2020

ಅವನಿ ಅವನಿಗಾಗಿ..

ಎಲೆ ನಭವೆ ಕೇಳಿ
ಬಿಡು ಎನ್ನ ಸಂದೇಶ
ನನ್ನೊಳಗೆ ಕುದಿಯುತಿಹ
ಭಾವ- ಆವೇಶ

ನೂರಾರು ಮಾತುಗಳು
ಮತ್ತೆ ಮೌನದ ಚಿತ್ತ
ಅತ್ತಿತ್ತ ಕೆಲ ನಲ್ಮೆ
ಮತ್ತೆ ತಾಳ್ಮೆಯ ಚಿತ್ರ

ತಲ್ಲಣದ ತಬ್ಬಿಬ್ಬು
ಜೊತೆಗಿಷ್ಟು ಆರೋಪ
ಮತ್ತಿಷ್ಟು ಮರುಳಾಟ
ಪ್ರಣಯ ಸಲ್ಲಾಪ

ನಿನ್ನ ಮುಗಿಲಿನ ನೀರ
ಸಾಗಿಸಿದೆ ಸಾಗರಕೆ
ಎನ್ನಂತರಗವನು
ಅದಕೆ ಬಸಿದೆ

ಗುಡ್ಡ ಕಾಡಿನ ಕವಿತೆ
ಕದಡಿಹುದು ಅದರಲ್ಲಿ
ಹಳ್ಳಿ ದಿಲ್ಲಿಯ ಗುಲ್ಲು
ಬೆರೆತಿಹುದು ಅಲ್ಲಿ

ಕಡಲೊಡಲು ಇರಬಹುದು
ಸಾರ ಅಭಿಸಾರದಲಿ
ಆವಿಯನು ನೀ ಸಲಹು
ವಾತ್ಸಲ್ಯದಲ್ಲಿ

ಮುಗಿಲುಗಟ್ಟಿದ ದಿಗಿಲ
ಕೇಳ ಬಯಸುವೆ ನಾನು
ಹಂಚಿ ಹಗುರಾಗೋಣ
ಸುಖ ದುಃಖವನ್ನು

ನಿನ್ನ ಪ್ರೀತಿಯ ಪರಿಯ
ದ್ರವವಾಗಿ ಹರಿಯಬಿಡು
ನಿನ್ನ ಮಾತನು ಎನಗೆ
ಮಳೆಯಾಗಿ ಕಳಿಸಿಕೊಡು

ಬಣ್ಣವಾಗಲಿ ಬದುಕು
ಬಳುವಳಿಯು ಒಲವು
ಉಭಯಕುಶಲೋಪರಿ 
ಮತ್ತೆ ಅಲ್ಲಿ ಸಾಂಪ್ರತವು

~Geethalakshmi Kochi

Wednesday, 1 April 2020

ಅವರೆಂಬ ಮಧ್ಯಮರು

ಅಲ್ಲಿ 
ಕೂಗಿದೆ,ಅಳಲಿದೆ
 ಕರುಳಿನ ತೊಳಲಾಟವಿದೆ
ಅದೆಷ್ಟೋ ವರ್ಷಗಳ ತಪಸ್ಸಿದೆ
ಕೊಳೆಯಾದ ಪಂಚೆಯ ಎಡೆಯಲ್ಲಿ, 
ಉಸಿರುಗಟ್ಟಿದ ಆಸೆಗಳಿವೆ !

ಅಲ್ಲಿ,
ಬದುಕು ಬಿದಿಗೆ ತುಂಬಲಿಲ್ಲ, 
ಬಸಿರು ಬದುಕಲಿಲ್ಲ
ಬಸಿಯಲಿಲ್ಲ , ಬೆಸೆಯಲಿಲ್ಲ
ಬಣ್ಣಿಸುವಷ್ಟು ಬಣ್ಣಗಳಿಲ್ಲ

 ಆದರೂ ಇವರು ಸಮರ್ಥರು!
ಇಲ್ಲಗಳನ್ನು ಅಲ್ಲಗಳೆದು
ಇಂಗಿದ ಇಂಗಿತಗಳ ಜೊತೆಗೆ 
ರಾಜಿಮಾಡಿದ್ದಾರೆ!
ನೀವು ಕೊಡುವ ಮಾತು,
ಮೌನವಾಗಿ ಮರೆತಿದ್ದಾರೆ,
ಅವರ ಬೆವರಿನ ಘಮಕೆ
ನೀವು  ಬಂಗಲೆ ಕಟ್ಟಿದರೂ
ಅವರು ದನಿ ಎತ್ತಲಾರರು,
ರಾಜೀನಾಮೆ ಬಯಸಲಾರರು!

ಈ ಅವರುಗಳು ಯಾರೆಂದು ಪ್ರಶ್ನೆ ಯೇ ಏಳುವುದಿಲ್ಲ
ಇವರು ಸರಾಸರಿಯ ಅಂಕಿಅಂಶಗಳಲ್ಲಿ ಸಾರಾಸಗಟು
ಸಪಾಯಿಯಾಗಿದ್ದಾರೆ
ಆದರೂ ಸಿಪಾಯಿಯಂತಿದ್ದಾರೆ
ಬೆಳವಣಿಗೆಗೆ ಬೆಳೆಯದೇ ಹೋದರು, ಬಲಿತಿದ್ದಾರೆ
ಮತ್ತು ನಿಮ್ಮನ್ನು ಬೆಳೆಸುತ್ತಿದ್ದಾರೆ!!

~Geethalakshmi Kochi

Friday, 27 September 2019

ಹುಡುಕಾಟ

ಅಲ್ಲಿ ಇಲ್ಲಿ ಸುತ್ತಲಲ್ಲಿ
ಗಲ್ಲಿ ಗಲ್ಲಿ ಸುತ್ತುವಲ್ಲಿ
ಮೆಲ್ಲ ದಾಟಿ ಹುಲ್ಲ ಹಾದಿ
ಹುಡುಕಿ ಹರುಷ ಸೆಲೆಯನಲ್ಲಿ

ಮತ್ತೆ ಸುತ್ತಿ ಕತ್ತಲಲ್ಲಿ
ಕಂಡು ಬೆಳಕ ಥಳುಕು ಅಲ್ಲಿ
ಬಿಡದೆ ದುಡಿದು ನಡೆದು ದೂರ
ಸೇರಲಿಲ್ಲ ಹರುಷದೂರ

ಬೆಳೆವ ದಾರಿ ಮುಗಿಯುತಿಲ್ಲ
ಮರಳಿ ತೆರಳೊ ಧೈರ್ಯವಿಲ್ಲ
ಸ್ಥಾಯಿಯಾಗಿ ಸ್ಥೈರ್ಯ ತಂದೆ
ಸ್ತಬ್ದದಲ್ಲಿ ಸುಖವನುಂಡೆ

ಕಣ್ಣ ಮುಚ್ಚಿ ಜಗವ ಕಂಡೆ
ಬದುಕು ಭಾವ ಮೀಟುತಿತ್ತು
ಎದೆಯ ಕದವ ಮೆಲ್ಲ ತೆರೆದೆ
ಅಲ್ಲಿ ಜೀವ ಕುಣಿಯುತಿತ್ತು

-Geethalakshmi kochi

Saturday, 14 September 2019



ಬರಹ ಬಿಸಿಲಿದ್ದಂತೆ!
          ಬಸಿದಷ್ಟೂ ಬಿಸಿ,ಬಿತ್ತಿದಷ್ಟೂ ಬಿತ್ತರಿಸಿ
                  ಮತ್ತೆಲ್ಲವನ್ನೂ ಬತ್ತಿಸಿ ಹಬೆಯಾಗಿಸುತ್ತದೆ!🌻

~Geethalakshmi Kochi

Monday, 20 May 2019

.................

ಭಾವಗಳ ಭಾವನೆಗೆ
ಲಯವಾಗೊ ಭಯವನ್ನು
ಅರಗಿಸದೆ ಅಡಗಿಸಿದೆ

ಬಂಧನಗಳಿಲ್ಲದ ಬದುಕಿನ
ಗಲ್ಲಿ ಗಲ್ಲಿ ,
ತಿರುಗಿದೆ ಬರಿಗಾಲಲ್ಲಿ

ಆ ಗಲ್ಲಿಗಳಲ್ಲಿ ದುಃಖ ಮಾತನಾಡಲಿಲ್ಲ
ಖುಷಿಗೆ ಕಣ್ಣು ಕಾಣುವುದಿಲ್ಲ
ಏಕತಾನತೆಯೊಂದು
ಹುಚ್ಚೆದ್ದು ಕುಣಿಯುತ್ತಿತ್ತು
ಹೂತಿಟ್ಟ ಭಾವನೆಗಳ ಕೆಣಕುತ್ತಿತ್ತು

ನನಗೆ ಸೋಲು ಒಗ್ಗಲಿಲ್ಲ
ನಾನೂ ರಟ್ಟೆ ತಟ್ಟಿದೆ
ಯುದ್ಧಕ್ಕೆ ಬದ್ಧಳಾದೆ
ಅಂತರಾತ್ಮ ಇಂದು ರಣರಂಗ

ಆದರೆ ಸಂಘರ್ಷದಲ್ಲಿ ಕೇವಲ
ನಾವೀರ್ವರಲ್ಲದೆ ಹಲವರ ದನಿಯಿತ್ತು
ಪ್ರತಿ ಗಲ್ಲಿಯ ಗುಲ್ಲಿತ್ತು

ಅಂತಃಕರಣ ಮತ್ತೆ ಮಿಡಿಯಿತು
ಓಹ್! ನಾನು ಬಂಧಿಸಿದ್ದು ಬಂಧನಗಳನಲ್ಲ
ಬಂಧಗಳನ್ನು!

ರಕ್ತಸಿಕ್ತ ಭಾವನೆಗಳನ್ನು ಕಂಡು
ಮುಲಾಮು ಹಚ್ಚಲು ಶುರುವಿಟ್ಟೆ
ಸಂಘರ್ಷದಲಿ ಸೋಲೊಪ್ಪಿದೆ
ಆದರೂ ದುಃಖವಿಲ್ಲ
ಗೆದ್ದೆ ಅನಿಸುತ್ತಿದೆ!!!!

~Geethalakshmi Kochi

Tuesday, 18 December 2018

ಅವಳ ನೆನಪಿನಲ್ಲಿ

ಇಂದೇಕೋ ಅವಳು ನೆನಪಾಗಿದ್ದಾಳೆ
ಒಂಟಿ ಕಣ್ಣಿನಿಂದ ಸರಕ್ಕನೆ
 ಹರಿದ ಹನಿಗೆ ನೆಪವಾಗಿದ್ದಾಳೆ

ಉಣ್ಣುವ ಅನ್ನದ ತುತ್ತಿನಲ್ಲಿ
ನೀರು ದೋಸೆಯ ತೂತಿನಲ್ಲಿ
ಬಿಸಿ ಹಾಲಿನ ನೊರೆಯಲ್ಲಿ
ತಟ್ಟೆಯ ತುಪ್ಪದ ಘಮದಲ್ಲಿ
ತನ್ನನ್ನು ಹುಡುಕಿಸುತ್ತಿದ್ದಾಳೆ!

ಒಗ್ಗರಣೆಯ ಸಾಸಿವೆಯ ಚಿಟಿಚಿಟಿಯಲ್ಲಿ
ಮಾವಿನ ಮಿಡಿಯ ಉಪ್ಪಿನಕಾಯಿಯಲ್ಲಿ
ವೆನಿಲ್ಲಾ ಐಸ್ ಕ್ರೀಮ್ ನ ಡಬ್ಬದಲ್ಲಿ
ಮೊಸರ ಮೇಲೆ ತೇಲುವ ಕೆನೆಯಲ್ಲಿ
ತನ್ನನ್ನು ಹುಡುಕಿಸುತ್ತಿದ್ದಾಳೆ!

ಅರಳಿದ ಗುಲಾಬಿ ಹೂವಿನಲ್ಲಿ
ಹಳೆಯ ಕರವಸ್ತ್ರದ ಅಂಚಿನಲ್ಲಿ
ಮುದುಡಿದ ನೂರರ ನೋಟಿನಲ್ಲಿ
ಕದಡಿದ ನನ್ನೆದೆಯಾಳದಲ್ಲಿ
ನನ್ನಜ್ಜಿ ನಗುನಗುತ ತನ್ನನ್ನು
 ಹುಡುಕಿಸಿದ್ದಾಳೆ!

ಇತ್ತೀಚಿಗೇಕೋ ಅವಳು ನೆನಪಾಗುತ್ತಿದ್ದಾಳೆ
ಒಂಟಿ ಕಣ್ಣಿನಿಂದ ಸರಕ್ಕನೆ
ಹರಿದ ಹನಿಗೆ ನೆಪವಾಗಿದ್ದಾಳೆ!

~Geethalakshmi Kochi

Thursday, 16 August 2018

ಅವನ ಬೆಳಕಿನಲ್ಲಿ



ಇಂದು ನನಗಾಗಿ ಅವನುರಿಸಿದ ಜ್ಯೋತಿ
ಬೆಳಗಲಿಲ್ಲ ;  ಬದಲಾಗಿ ಪ್ರಜ್ಞಲಿಸಿತು!
ಸುತ್ತಲ ಕತ್ತಲೆಯಷ್ಟೇ ಸರಿಸಲಿಲ್ಲ ,
ಜಗದಗಲದ ಹೊಳಹು ನನ್ನೊಳಗೆ ತೂರಿಸಿತು !!

ಈ ಬೆಳಕನ್ನು ಬೀರುತ್ತಿರುವುದು ದೀವಿಗೆಯೋ ?
ಅಲ್ಲ... ಅವನ ಮೊಗದ ಮಂದಹಾಸ ?
ಇಂದೇಕೋ ತಬ್ಬಿಬ್ಬಿನಲೂ ಬೆಳಕಿನ ಭಾಸ
ಇದೆಂತಹಾ ಆಭಾಸ .....??

ಅಷ್ಟರಲ್ಲಿ ಅವನು ನನ್ನತ್ತ ಹೆಜ್ಜೆ ಬೆಳೆಸಿದ
ನನ್ನ ಹತ್ತಿರ ಬಂದ!
ಹಾಂ, ಇನ್ನಷ್ಟು.. ಹೌದು,ಮತ್ತಷ್ಟು,

ಕಳೆದ ಬಾರಿ ನಾನು ಹುಟ್ಟುವಾಗ
ಇದೇ ಬೆಳಕ ಕಂಡಿದ್ದೆ
ನನ್ನ ಅಮ್ಮನ ನೋವು ನಲಿವು
ಅವಳಪ್ಪುಗೆಯಲರಿತಿದ್ದೆ

ಮತ್ತದೇ ಅನುಭವ???

ಓಹ್, ಸಾವೂ ಇಷ್ಟು ಮನೋಹರವೇ..?
ಅವನ ಕಿವಿಯಲ್ಲಿ ಪಿಸುಗುಟ್ಟಿದೆ
ಅವನೊಮ್ಮೆ ನನ್ನ ದಿಟ್ಟಿಸಿದ

ನನ್ನ ಮುಪ್ಪಿನ ನರೆ ಮಾಜಿದಂತಿದೆ
ನನ್ನುಸಿರು ಅವನುಸಿರಿನಲಿ ಬೆರೆತಂತಿದೆ
ಪ್ರೀತಿಯಿಂದ ನನ್ನ ನೆತ್ತಿಯನ್ನವನು ಚುಂಬಿಸಿದ
ಅವನ ಆಲಿಂಗನದಲೆಲ್ಲೋ ತೇಲಿಸಿದ.

~Geethalakshmi Kochi

Tuesday, 3 July 2018

ನಡೆದಷ್ಟು ದಾರಿ...





ಭಾಗ-೦೩


            ನಾವು ಒಂದಷ್ಟು ದೂರ ಹುಡುಕುತ್ತಾ ನಡೆದೆವು. ಎಲ್ಲೂ ಯಾವುದೇ ಬೆಳಕಿರಲಿಲ್ಲ.  ಸುತ್ತಮುತ್ತ ಕಾಡಲ್ಲದಿದ್ದರೂ ಮರ,ಗಿಡ, ಪೊದೆಗಳಿಂದ ಆವೃತ ಪ್ರದೇಶವಾಗಿತ್ತು.ಯಾವುದೇ ಮನೆ ಇರಲಿಲ್ಲ.ಸಾಲದ್ದಕ್ಕೆ ನೆಟ್ವವರ್ಕ್ ಇರ್ಲಿಲ್ಲ. ತುಂಬಾ ಚಳಿ ಇತ್ತು."ನೀವ್ಯಾಕೆ ಇಲ್ಲಿ ಬಂದ್ರಿ" ಎಂದು ಬಲಭಾಗದಿಂದ ಶಬ್ದ ಬಂತು. ತಿರುಗಿ ನೋಡಿದರೆ ಆರ್ಯಾಹಿ.
        "ನೀನ್ಯಾಕೆ ಬಂದೆ?ಅದೂ ಹೇಳ್ದೆ,ಕೇಳ್ದೆ. ಈ ಕತ್ತಲೆಯಲ್ಲಿ ನಿನ್ನನ್ನು ಹುಡುಕುವುದಾದರೂ ಹೇಗೆ?ಎಷ್ಟು ಭಯ ಪಟ್ವಿ ಗೊತ್ತಾ?"ಅಂದೆ ಸ್ವಲ್ಪ ಗದರಿಸಿ. ಆರ್ಯಾಹಿ ನಗ್ತಾ ಹೇಳಿದ್ಲು" ಈ ಕಾರಣದಿಂದ್ಲೇ ಸರಿ. ನೀವಿಬ್ಬರೂ ನಿಮ್ಮದೇ ಜಗತ್ತಿನಿಂದ ಹೊರ ಬಂದ್ರಿ."
"ನೀನು ಯಾವತ್ತಿದ್ರೂ ನಿನ್ನ ತಪ್ಪು ಒಪ್ಪುವವಳೇ ಅಲ್ಲ.ಇಲ್ಲಿಂದ ಹೋಗೋಣ. ಹಸಿವು  ಬೇರೆ ಆಗ್ತಿದೆ ಅಂದ ಆದಿತ್ಯ.
"Okay.ಹೋಗುವಾಗ ಎರಡೆರಡು ಕಟ್ಟಿಗೆ ಎತ್ತಿಕೊಳ್ಳಿ "ಅಂದ್ಲು ಆರ್ಯಾಹಿ. ಕಾರಿನ ಹತ್ತಿರ ಆ ಕಟ್ಟಿಗೆ ರಾಶಿ ಹಾಕಿ ಮೆಲ್ಲ ಬೆಂಕಿ ಉರಿಸಿದಳು ಆರ್ಯಾಹಿ.
ಆ ಬೆಂಕಿ ಮನಸ್ಸಿನ ನೋವು, ದ್ವೇಷ, ಬೇಸರಗಳನ್ನು ಉರಿಸಲೆತ್ನಿಸಿದಂತೆ ತೋರಿತು ಒಳ ಮನಸ್ಸಿಗೆ.ಅಷ್ಟರಲ್ಲಿ ಆರ್ಯಾಹಿ"I think it's time to talk.I can figure out that so much is going on and you guys also want to talk..exactly ನಾವು ಮೊದಲು ಮಾತನಾಡಿದ ಹಾಗೆ.." ಅಂದಳು.
 "ಹುಂ.ತುಂಬಾ ಇದೆ ಮಾತನಾಡಲು..ಆದರೆ exactly ಏನು ಎನ್ನುವುದು ನನಗೂ ಗೊತ್ತಿಲ್ಲ. ನಾನು 4 top    ಕಾಲೇಜಿನಲ್ಲಿ ಓದಿ , ತುಂಬಾ ಒಳ್ಳೆಯ ಕೆಲಸ ದೊರೆತರೂ ಅದ್ರಿಂದ ಅಂಥಾ ಖುಷಿ ಸಿಗ್ತಾ ಇಲ್ಲ.ಸ್ಲೀಪಿಂಗ್ ಪಿಲ್ಸ್ ಇಲ್ಲದೆ ನಿದ್ದೆ ಬರ್ತಾ ಇಲ್ಲ."ಎಂದು ಆದಿತ್ಯ ಹೇಳಿದ.

"ಐ ಥಿಂಕ್ ಇಟ್ಸ್ ಜಸ್ಟ್ ದ ಟೈಮ್. ಯು ಆಲ್ಪೇಸ್ ಆಂಡ್ ಆಲ್ವೇಸ್ ಲಿವ್ಡಡ್ ಅಂಡರ್ ಪ್ರೆಶರ್.ರಿಲಾಕ್ಸ್,ಯು ಆರ್ ಆನ್ ಅ ಬ್ರೇಕ್ ಆಲ್ ರೆಡಿ.ಎಲ್ಲಾ ಸರಿಯಾಗ್ತದೆ "ಅಂದಳು ಆರ್ಯಾಹಿ.
ನಾನು ನಗ್ತಾ ಹೇಳಿದೆ-"ಆರ್ಯಾ,ಯು ಆಲ್ವೇಸ್ ನೊ ವಾಟ್ ಟು ಸೆ"
ಅವಳು ಅದಕ್ಕೆ ಮಣಿ ಪೋಣಿಸಿ ಹೆಣೆದಂತೆ ಹೇಳಿದ್ಲು,"ಎಸ್.ಐ ಥಿಂಕ್ ಇವನ್ ಯು ಶುಡ್ ಓಪನ್ ಅಪ್.ನನ್ನ ಹತ್ರ ನಿನ್ನ ಪ್ರಾಬ್ಲಮ್ಗಗೂ ಸೊಲ್ಯೂಷನ್ ಇರ್ಬಹುದೇನೋ.."
"ಹುಂ.. Sure.. ಗಂಟೆ ಬೆಳಗ್ಗಿನ 3.ನಾವು ಹೊರಡೋಣ.ಟೈಮ್ ಇದೆ ತಾನೇ?ಹೇಳ್ತೀನಿ ಬಿಡು"ಅಂದೆ.

ನಾವು ಮತ್ತೆ ಹೊರಟೆವು.. ದಾರಿ ಈಗ ಮತ್ತಷ್ಟು ಆಪ್ಯಾಯಮಾನವಾದಂತಿತ್ತು.....



       *********************************

           ~Geethalakshmi Kochi








Sunday, 17 June 2018

ನಡೆದಷ್ಟು ದಾರಿ...

ಬದುಕಿನ ಜಾಡು ಹಿಡಿದು
ಭಾಗ -೨

ಕೊನೆಗೂ ಯಾತ್ರೆ ಶುರುವಾಗಿತ್ತು. ಮಾತು ಮಾತ್ರ ಶುರು ವಾಗಲೇ ಇಲ್ಲ.ಸಂಜೆ ಮೆಲ್ಲಗೆ ಇರುಳ ತೆಕ್ಕೆಗೆ ಜಾರುತ್ತಿತ್ತು.

ಆರ್ಯಾಹಿ ಒಬ್ಳನ್ನು ಬಿಟ್ಟು ನಾವಿಬ್ಬರೂ ಏನೇ ವಿಷಯ ಇರ್ಲಿ,ನೂರು ಬಾರಿ ಯೋಚಿಸಿದವರು.ಸಾವಿರ ಬಾರಿ ಪರಾಮರ್ಶೆ ಮಾಡುವವರು. ಫ್ಯೂಚರ್ ಸೆಕ್ಯೂರ್ ಮಾಡ್ಬೇಕು ಅನ್ನುವ ಒಂದೇ ಒಂದು ಬಾಟಮ್ ಲೈನ್ ಇಟ್ಕೊಂಡು ಹಗಲು ರಾತ್ರಿ ದುಡಿದವರು.
     ಆದರೆ ಯಾಕೋ!ನನಗೆ ಈ trip ಪ್ಲಾನ್ಡ್ ಆಗಿರ್ಬೇಕು ಅಂತನ್ನಿಸಲಿಲ್ಲ.ಅಷ್ಟರಲ್ಲಿ ಸರಕ್ಕನೆ ನಾಯಿ ಮರಿ road ದಾಟಿದರ ಫಲವಾಗಿ ಆರ್ಯಾ ಹಟಾತ್ತನೆ brake ಹಾಕಿದ್ಹು,ಕಾರಿಗೆ ಮತ್ತೆ ನನ್ನ ಯೋಚನೆಗೆ!!
        ಆದಿಯೂ ಅಷ್ಟೇ. ತನ್ನದೇ ಪ್ರಪಂಚದಲ್ಲಿ ಇದ್ದ ಆತ ಈಗ ನೂರಾರು ಪ್ರಷ್ನೆಗಳನ್ನು ಒಂದೇ ಉಸಿರಿಗೆ ಕೇಳಿದ.
ಎಲ್ಲಿಗೋಗ್ತಾ ಇದ್ದೇವೆ?
ಹೇಗೆ ಹೋಗ್ತಾ ಇದ್ದೀವಿ?
ಯಾವ ರೋಡ್? etc etc etc.
ಆದ್ರೆ ಆರ್ಯ ಉತ್ತರ ಕೊಡಲಿಲ್ಲ. ವಿಷಯವನ್ನು ಹಾರಿಕೆಯಲ್ಲೇ ಮರೆಯಾಗಿಸಿದಳಾಕೆ.
      ರೋಡ್ NH48 ಅಂತ ಗೊತ್ತಾಯ್ತು.ರಾತ್ರೆ ಸುಮಾರು 10 ಗಂಟೆ ಸಮಯ.ಸ್ವಲ್ಪ ಹೊತ್ತಿನ ಬಳಿಕ ಮುಂದೆ ಹೋಗೋಣ ಎಂದು ಅಲ್ಲಿಂದ ಆಚೆಗಿನ ಜನನಿಬಿಡ ಜಾಗಕ್ಕೆ ತೆರಳಿದೆವು.
ಆರ್ಯಾ ಕಾರಿಂದ ಕೆಳಗಿಳಿದ್ರೆ ನಾವು ಮೆಲ್ಲ ಮಾತಿಗಿಳಿದೆವು.
"Even though we always wanted to be on the same page right now we are on the different books .ಆರ್ಯಾಹಿ ಅವತ್ತು ಮನೆ ಬಿಟ್ಟು ಹೋದಾಗ ಡಿಪ್ರೆಷನ್ ಅಂದ್ಕೊಂಡೆ.But it takes a lot of courage."ಅಂದ ಆದಿ.
"Are we jealous of her lifestyle?"  ಎಂದೆ.
ಅಸೂಯೆ ಅಲ್ಲ;ಆಸೆ. ಸ್ವಚ್ಛಂದವಾಗಿ ಬದುಕಲು. ಯಾರಿಗೂ ಯಾವುದೇ ಜಸ್ಟಿಫಿಕೇಷನ್ ಕೊಡದೆ ನಮ್ಮದೇ ಸಾಮ್ರಾಜ್ಯದ ದೊರೆಯಾಗಲು.ಇನ್ನೊಬ್ಬರ ಅರಮನೆಯ servant ಆಗುವುದಕ್ಕಿಂತ ನಮ್ಮದೇ ಗುಡಿಸಲಿನಲ್ಲಿ ರಾಜನಾಗುವುದು ಒಳ್ಳೆಯದು.
ಏನೋ ಶಬ್ದ ಕೇಳಿ ಹೊರಗಿಳಿದ್ರೆ ಅಲ್ಲಿ ಆರ್ಯಾಹಿ ಇರ್ಲಿಲ್ಲ. ಮನಸ್ಸಿನಲ್ಲಿ ನೂರು ಪ್ರಷ್ನೆ,ಭಯ,ಆತಂಕ, ಗಾಬರಿ. ಚಿಕ್ಕಂದಿನಲ್ಲಿ ಒಮ್ಮೆ ಅವಳು  ಕಾಣೆಯಾಗಿ ಊರಿಡೀ ಹುಡುಕಿದ ನೆನಪಾಯ್ತು. ಕ್ಯಾಮೆರಾ ಬಿಟ್ಟು ಹೋದುದರಿಂದ ಎಲ್ಲೂ ಹೋಗಿರಲಿಕ್ಕಿಲ್ಲ ಎಂಬ ಹುಂಬ ಧ್ಯೈರ್ಯ.


ಆದರೆ ನಮ್ಮಲ್ಲಿ ನಾವೇ ಕಳೆದು ಹೋಗಿರುವಾಗ ಅವಳನ್ನು ಹುಡುಕುವುದಾದರೂ ಹೇಗೆ???

           
               *********************
                                           (ಮುಂದುವರಿಯುತ್ತದೆ)

~Geethalakshmi Kochi







Sunday, 10 June 2018

ನಡೆದಷ್ಟು ದಾರಿ...

    ಬದುಕಿನ ಜಾಡು ಹಿಡಿದು

ಭಾಗ-೧





ಅವತ್ಯಾಕೋ ಅಚಾನಕ್ಕಾಗಿ ಮಳೆ ಸುರೀತು.ಮನೆ ಮಾಡಷ್ಟೇ ಅಲ್ಲ;ಮನಸ್ಸೂ ಸೋರುತ್ತಿತ್ತು.ನಾವು ಮೂವರೂ ಜೊತೆಗೇ ಇದ್ವಿ.ನಾವು ಅಂದ್ರೆ ಆದಿತ್ಯ, ಆರ್ಯಾಹಿ ಮತ್ತು ನಾನು-ಅಷ್ಮಾಯು.ನಾವು ಕಸಿನ್ಸ್. ಒಬ್ಬರಿಗೊಬ್ಬರು ಜೀವ. ನಾಲ್ಕು ವರ್ಷಗಳ ನಂತರ ಸಿಗ್ತಾ ಇದ್ದೇವೆ.
        ಆದಿತ್ಯ ಇಂಜಿನಿಯರಿಂಗ್ ಮಾಡಿ ಅಮೇರಿಕಾದಲ್ಲಿ ಸೆಟ್ಲ್ಲಾದವನು.ನಾನು ಎಂ.ಬಿ.ಎ ಮಾಡಿ 
ಬೆಂಗಳೂರಿನಲ್ಲೇ ಇದ್ರೆ ಆರ್ಯಾಹಿ ಎಲ್ಲಿರ್ತಾಳೆ ಅಂತ  ಯಾರಿಗೂ ಐಡಿಯಾ ಇರ್ಲಿಲ್ಲ.೧೦ನೇ ತರಗತಿಯ ನಂತ್ರ ತನ್ನ ಕ್ಯಾಮೆರಾ ಜೊತೆ ಮನೆ ಬಿಟ್ಟವಳು ವಾಪಸ್ಸು ಬಂದದ್ದು ಇವಾಗ್ಲೆ. ಆವಾಗ ಇವಾಗ ಕಾಲ್ ಮಾಡ್ತಾ ಇದ್ರೂ ಇವಳೆಲ್ಲಿದ್ದಾಳೆ ಅಂತ ಹೇಳ್ತಾನೆ ಇರ್ಲ್ಲಿಲ್ಲ. ಪೇರೆಂಟ್ಸ್  ಬೆಂಗಳೂರಿನಲ್ಲಿದ್ರೂ ನಾವು ನಮ್ಮ reunion 
ಪ್ಲಾನ್ ಮಾಡಿದ್ದು ಕೊಡಗಿನ ಒಂದು ಹಳೇ ಮನೆಯಲ್ಲಿ.
                    ಆಗ್ಲೇ ಮಳೆ ಬರ್ತಾ ಇದೆ ಅಂದ್ನಲ್ಲ.ಆದ್ರೆ ಆ  ಫೀಲಿಂಗ್ ಇರ್ಲಿಲ್ಲ.ಮಳೆ ಝಲ್ಲೆನಿಸಲಿಲ್ಲ!!ಗುಡುಗೂ ಹೆದರಿಸಲಿಲ್ಲ.ಕನಸು?ಮೊದಲೇ ಕರಗಿತ್ತಲ್ಲ.ಚಿಗುರುವ ಹಾಗೆ ಕಾಣಿಸಲಿಲ್ಲ. ಹೀಗಿರುವಾಗ  ನಿಮ್ಗೇ ನಮ್ಮ ಮೂವರ 
ಲೈಫಲ್ಲು ಏನೇನೋ ಪ್ರಾಬ್ಲಮ್ಸ್ ಇದೆ ಅಂತ ಗೊತ್ತಾಗುವಾಗ ನಮ್ಗೂ ಗೊತ್ತಾಗ್ಲೇ ಬೇಕು!
                                ಸಡನ್ನಾಗಿ ಆರ್ಯಾಹಿ "ಬ್ಯಾಗ್ ಪ್ಯಾಕ್ ಮಾಡಿ, ಸಂಜೆ 6:30ಕ್ಕೆ ಹೊರಡೋಣ" ಅಂದ್ಳು.

ಎಲ್ಲಿ??
ಗೊತ್ತಿಲ್ಲ..
ಯಾಕೆ???
ಬದುಕು ಒಂದು ಪಯಣ ಎನ್ನುವುದು ಎಲ್ಲರೂ ಕೇಳಿರುವ ಫಿಲಾಸಫಿ. ಅದ್ರಲ್ಲಿ ಎಳ್ಳಷ್ಟಾದ್ರೂ ನಿಜ ಆಗಿದ್ರೆ ನಮ್ಗೆ ಈ ಪ್ರಯಾಣದಿಂದ ಏನಾದ್ರೂ ಸೊಲ್ಯೂಷನ್ ಸಿಗ್ಲೇ ಬೇಕು ಅಂದ್ಕೊಂಡೆ.
              
ಹೇಗಿದ್ರೂ ಮೂವರ ಬದುಕಲ್ಲೂ ಅರೆ ಕತ್ತಲೆ ಕವಿದಿರುವಾಗ ಅರೆಬೆಳಕ ಹಾದಿಯ ಯಾತ್ರೆ ಶುರುವಾಗ್ಲೇ ಬೇಕಿತ್ತು.

                                           (ಮುಂದುವರಿಯುತ್ತದೆ)

                ************************
~Geethalakshmi Kochi


   
     

Wednesday, 30 May 2018

ಹೆಸರಿಡದ ಕವನ






ನನ್ನೊಳಗೆ ಬಲೆಯೊ ನಾನು ಬಲೆಯೊಳಗೊ
ಜಿಜ್ಞಾಸೆಯೊಂದು ಬಲಿತು ನಿಂತಿಹುದು
ಉತ್ತರವರಸಿ ಅರಗಿಸುವ ಮುನ್ನ
ಪ್ರಶ್ನೆಯೂ ಬಲೆಯೊಳಗೆ ಸಿಲುಕಿದಂತಿಹುದು

ಹೊರನೋಟ ಗೋಜಲು ಒಳನೋಟವೂ ಅಯೋಮಯ
ಅಡಿಯಿಟ್ಟಲ್ಲೆಲ್ಲ ಬರಿಯ ಗೌಜಿ ಗುಲ್ಲು
ಮೌನ ಕಟ್ಟೆಯನೊಡೆದು ಮಾತಿನರಮನೆ
ಕಟ್ಟಿದರೂ ; ಅರ್ಧವಷ್ಟೆ ಸತ್ಯ ಮಿಗಿದರ್ಧ ಸುಳ್ಳು

ಬದುಕು ಬಣ್ಣದ ಒಳಗೊ ಬಣ್ಣವೇ ಬದುಕೊ
ಬಣ್ಣನೆಯ ಬಣ್ಣದಾಚೆಯ ಬರಿಯ ಮಸಿಯೋ?
ಝಗಮಗಿಪ ಜಗವ ಜಾಲಾಡಿ ನೋಡಿದರೆ
ಮೃಗತೃಷ್ಣೆಯಂತೆ ಬರಿಯ ಹುಸಿಯೋ


~Geethalakshmi Kochi




Monday, 16 April 2018

ಕನಸುಗಳು ಮಾರಾಟಕ್ಕಿವೆ ...!!

ಇದು ಮಹಾನಗರದ ಗಾಥೆ
ಬೆಳಕಿನ ಅಧಿಪತ್ಯ , ಶಾಸನ , ಒಡ್ಡೋಲಗ
ಕತ್ತಲೆ ಇಲ್ಲಿ ಪೂರ್ತಿ ಬೆತ್ತಲೆ....

ಗಗನಚುಂಬಿ ಕಟ್ಟಡದ
ಹವಾನಿಯಂತ್ರಿತ ಕೊಠಡಿಯಲ್ಲಿ
ಬಾಜಾರಿನ ಗಿಜಿಗಿಜಿ
ಗೌಜಿ ಗುಲ್ಲಿನಲ್ಲಿ
ವೇಗವನ್ನೂ ಮೀರಿಸ
ಹೊರಟ ಆವೇಗದಲ್ಲಿ..

ಬೆಳಕೇ ಚಾದರ ಬೆಳಕೇ ಹಾಸಿಗೆ
ಇರುಳು ಕೇವಲ ಹೆಸರಿಗೆ
ಕನಸು ಬಿಕರಿಯ ಬುಟ್ಟಿಗೆ....



~Geethalakshmi Kochi

Friday, 16 March 2018

ಅಡಿಗರಿಗೆ...

ಕಟ್ಟುಪಾಡಿನ ಕಟ್ಟೆಯನ್ನೊಡೆದು
ಕಟ್ಟಿದಿರಿ ಹೊಸತೊಂದು ಕಾವ್ಯಪ್ರಪಂಚ
ನವ ನವ್ಯ  ಬಿತ್ತಿದಿರಿ;ಭವ್ಯತೆಯ ಪರಾಕಾಷ್ಠೆ --  ಯನೂ ಮೀರಿಸಿ
ಬರಹಕ್ಕೆ ನೀಡಿ ಹೊಸ ಕಾವ್ಯಮಂಚ

ಕಾವ್ಯಾಂತರಂಗದಲಿ ಭಾವಾಂತರಂಗ ಮೂಡಿಸುತ ತುಂಬಿದಿರಿ ನೂರಾರು ರಂಗುರಂಗ
ಕವಿತೆ ಕಟ್ಟುವ ಬದಲು ನವ ಕಾವ್ಯ ಹುಟ್ಟಿಸುತ
ಉರಿಸಿದಿರಿ ಎದೆಯೊಳಗೆ ಹೊಸತೊಂದು ಕಿಚ್ಚ

ಭೂಮಿ ಗೀತೆಯ ಹಾಡಿದಿರಿ ,ಮೋಹನ ಮುರಳಿಯ ಕರೆಯ ಕೇಳಿಸಿದಿರಿ  ಚಿಂತಾಮಣಿಯಲ್ಲಿ ಕಂಡ ಮುಖವ
ಬಣ್ಣಿಸಿದಿರಿ

ತಾವಿಟ್ಟ ಪ್ರತಿಯಡಿಯಲ್ಲೂ
ಬೆಳೆಯುತ್ತಲೇ ಹೋದಿರಿ
ಕನ್ನಡ ಕಾವ್ಯ ಕೃಷಿಯನ್ನು
ಬೆಳೆಸುತ್ತಲೇ ಹೋದಿರಿ
ಮತ್ತೆ, ಕನ್ನಡ ಕಾವ್ಯದ ಕಂಪ
ಪಸರಿಸುತ್ತಲೇ ಹೋದಿರಿ

~Geethalakshmi Kochi


Sunday, 11 February 2018

ನಾನು ಬರೆಯುತ್ತೇನೆ...!

ನಾನು ಬರೆಯುತ್ತೇನೆ
ನನ್ನೊಡಲ ಕಳವಳದ ಕಡಲ
ಹುಟ್ಟುಹಾಕುವುದಕ್ಕೆ
ಸಂವೇದನೆಯ ಸಂವಾ-
ದಿಸುವ ಹಪಾಹಪಿಗೆ
ಮೌನವನು ಮಾತ-
ನಾಡಿಸುವ ಜಿದ್ದಾಜಿದ್ದಿಗೆ
ಬಿಡಲಾರದ ಹುಚ್ಚಿಗೆ
ಅಂತರಾಳದ ಕಿಚ್ಚಿಗೆ
ಕತ್ತಲ ಕೋಟೆಯಲಿ
ಬೆಳಕು ಬಿತ್ತುವುದಕ್ಕೆ
ಮತ್ತೆ ಬೆಳಕ ಭೇದಿಸಿ
ಕತ್ತಲಲಿ ಕಳೆದು ಹೋಗುವುದಕ್ಕೆ
ಅರೆಬೆಳಕ ಹಾದಿಯಲಿ
ಅನಾಮಿಕ ಆಸರೆಗೆ
ನಾನೇನೋ ಗೀಚುತ್ತೇನೆ!
ನಾನು ಬರೆಯುತ್ತೇನೆ...!!

~Geethalakshmi Kochi


Monday, 29 January 2018

ಅನಿರ್ವಚನೀಯ

ಮಾತೆಲ್ಲ ಮರೆತು ಮೌನ-
ದೇವರಿಗೆ ಶರಣಾದೆ
ಭಾವ ದೀವಿಗೆ ಹಚ್ಚಿದೆ
ನನ್ನ ದೇವರು ಗರ್ಭಗುಡಿಯಿಂದ
ಹೊರಬಂದಂತಿದೆ
ಅರೆಬೆಳಕ ಹಾದಿಯಲಿ ಯಾರೋ
ಕೈ  ಹಿಡಿದು ನಡೆದಂತಿದೆ
ಕವಿತೆ ಒಲ್ಲೆ ಎಂದರೂ
ನವ್ಯ ನಲ್ಲೆಯಾದಂತಿದೆ


~Geethalakshmi Kochi

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...