Tuesday 18 December 2018

ಅವಳ ನೆನಪಿನಲ್ಲಿ

ಇಂದೇಕೋ ಅವಳು ನೆನಪಾಗಿದ್ದಾಳೆ
ಒಂಟಿ ಕಣ್ಣಿನಿಂದ ಸರಕ್ಕನೆ
 ಹರಿದ ಹನಿಗೆ ನೆಪವಾಗಿದ್ದಾಳೆ

ಉಣ್ಣುವ ಅನ್ನದ ತುತ್ತಿನಲ್ಲಿ
ನೀರು ದೋಸೆಯ ತೂತಿನಲ್ಲಿ
ಬಿಸಿ ಹಾಲಿನ ನೊರೆಯಲ್ಲಿ
ತಟ್ಟೆಯ ತುಪ್ಪದ ಘಮದಲ್ಲಿ
ತನ್ನನ್ನು ಹುಡುಕಿಸುತ್ತಿದ್ದಾಳೆ!

ಒಗ್ಗರಣೆಯ ಸಾಸಿವೆಯ ಚಿಟಿಚಿಟಿಯಲ್ಲಿ
ಮಾವಿನ ಮಿಡಿಯ ಉಪ್ಪಿನಕಾಯಿಯಲ್ಲಿ
ವೆನಿಲ್ಲಾ ಐಸ್ ಕ್ರೀಮ್ ನ ಡಬ್ಬದಲ್ಲಿ
ಮೊಸರ ಮೇಲೆ ತೇಲುವ ಕೆನೆಯಲ್ಲಿ
ತನ್ನನ್ನು ಹುಡುಕಿಸುತ್ತಿದ್ದಾಳೆ!

ಅರಳಿದ ಗುಲಾಬಿ ಹೂವಿನಲ್ಲಿ
ಹಳೆಯ ಕರವಸ್ತ್ರದ ಅಂಚಿನಲ್ಲಿ
ಮುದುಡಿದ ನೂರರ ನೋಟಿನಲ್ಲಿ
ಕದಡಿದ ನನ್ನೆದೆಯಾಳದಲ್ಲಿ
ನನ್ನಜ್ಜಿ ನಗುನಗುತ ತನ್ನನ್ನು
 ಹುಡುಕಿಸಿದ್ದಾಳೆ!

ಇತ್ತೀಚಿಗೇಕೋ ಅವಳು ನೆನಪಾಗುತ್ತಿದ್ದಾಳೆ
ಒಂಟಿ ಕಣ್ಣಿನಿಂದ ಸರಕ್ಕನೆ
ಹರಿದ ಹನಿಗೆ ನೆಪವಾಗಿದ್ದಾಳೆ!

~Geethalakshmi Kochi

No comments:

Post a Comment

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...