Tuesday 9 June 2020

Saga of ಸಾಗುವಾನಿ!

ಚಿತ್ರ ಕೃಪೆ : ಅಂತರ್ಜಾಲ

ನೇಪಥ್ಯಕ್ಕೆ ಸರಿದಿದ್ದ ಒಂದು ನೆನಪು ಇಂದು ಏಕಾಏಕಿ ನನ್ನ ಮನೆ ಮುಂದೆ , ಮನದ ಮುಂದೆ ಚಪ್ಪಲಿ ಕಳಚಿ ನಿಂತಂತಾಯಿತು.
ಈ ನೆನಪು ಐದು ವರ್ಷದ ಗೀತಳ  ಕನಸು. ಗೀಚದೆ ಉಳಿದದ್ದು.
.
ಕೃಷಿ ಕುಟುಂಬದ ಕುಡಿಯಾಗಿ ಬೆಳೆದ ಅಥವಾ ಬೆಳೆಯುತ್ತಿದ್ದ ಗೀತಳಿಗೆ ಗಿಡಗಳನ್ನು ಬೆಳೆಸುವುದು, ಅವುಗಳ ಜೊತೆಗೆ ಮಾತನಾಡುವುದು, ಅವಳು ನೆಟ್ಟ ಹೂಗಿಡದ ಹೂ ದೇವರಿಗೆ ಅರ್ಪಿಸಲು ಅಜ್ಜ ಕೀಳುವಾಗ ಸಿಡುಕುವುದು ಹೇಗಿದ್ದರೂ ಸಹಜತೆಯೇ ಆಗಿತ್ತು.
.

ಹೀಗಿರುವಾಗ ಕೇರಳ ಸರ್ಕಾರ ಪ್ರತಿ ಸರಕಾರಿ ಶಾಲೆಯ ಮಕ್ಕಳಿಗೆ ಪರಿಸರ ದಿನಾಚರಣೆಯ ಪ್ರಯುಕ್ತ ಒಂದೊಂದು ಗಿಡದಂತೆ ವಿತರಿಸಿತು. ಹೀಗೆ ಗೀತಳ ಪಾಲಿಗೆ ಸೇರಿದ್ದು ಒಂದು ಸಾಗುವಾನಿ ಗಿಡ.ಗೆಳೆಯರಿಗೆ ಹೆಚ್ಚಿನವರಿಗೂ ಡಿಸೆಂಬರ್ ಫ್ಲವರ್!!! ಸಾಗುವಾನಿ ಗಿಡಕ್ಕೆ ಹೋಲಿಸಿದರೆ ಉದ್ದವೂ ಹೆಚ್ಚಾಗಿತ್ತು. ! ಅವರಿಗೆ ಬೇಗ ಹೂ ಸಿಗುವ ಆಶಯವೂ ಇತ್ತು. ಆದರೆ ಪುಟ್ಟ ಸಾಗುವಾನಿ ಎಲ್ಲದಕ್ಕಿಂತ ಮುದ್ದಾಗಿತ್ತು.ಇದನ್ನು ಬೆಳೆಸ ಬೇಕಿದ್ದರೆ ಸಾಧಾರಣವಾಗಿ ಮಕ್ಕಳಿಗಿರುವ ನಾಲ್ಕೈದು ತಿಂಗಳಲ್ಲಿ ಫಲ ಪಡೆಯುವ ಆಶಯ ಬಿಡಬೇಕಿತ್ತು. ಮತ್ತು ಯಾವುದೇ ರೀತಿಯ ಝಿಲ್ಮಿಲ್ ಕನಸುಗಳು ಇರಬಾರದಿತ್ತು.ಅಥವಾ ಇನ್ನೊಂದು ಆಯ್ಕೆಯಾಗಿ ಸೀದಾ ಅಪ್ಪನ ಕೈಯಲ್ಲಿಟ್ಟು ಜವಾಬ್ದಾರಿ ಮುಗಿಸಬಹುದಿತ್ತು.
.
ಆದರೆ ಗೀತಾ ಆ ಗಿಡದ ಮಡಿಲಾಗ ಬಯಸುತ್ತಾಳೆ. ಗೆಳತಿಯಾಗಲಿಚ್ಛಿಸುತ್ತಾಳೆ. Long-term ಅಂದರೇನು ಎಂದರಿಯದ ವಯಸ್ಸಿನಲ್ಲಿ ಈ ಗಿಡ ಮರವಾಗುವ ಕನಸು ಕಾಣುತ್ತಾಳೆ, ಮತ್ತು ಆ ಕನಸಿನ ಮನಸ್ಸು ಸಾಗುವಾನಿಗೆ ಸರಿಯಾದ ನೆಲೆ ಮತ್ತು ನೆಲ ಹುಡುಕುತ್ತದೆ.
ಅಂಥಿಂಥಾ ಜಾಗವಲ್ಲ..ಅಂಗಳದ ಹೂ ದೋಟದಲ್ಲಿ ನೆಡುವಂತಿಲ್ಲ, ಕಂಗಿನ ತೋಟದಲ್ಲಿ ನೆಟ್ಟರೆ ಮುಂದೆ ಬೆಳೆದಾಗ ಅಡಿಕೆ ಮರಗಳಿಗೆ ತಾಗಿ ಹಬ್ಬಿ ಉಪದ್ರವವಾಗಿಬಿಡಬಹುದು. ಇನ್ನು ಮನೆಯ ಮೇಲ್ಬಾಗದ ತೆಂಗಿನ ತೋಟದಲ್ಲಿ ನೆಟ್ಟರೆ ಅದರ ಮೇಲೆ ದೃಷ್ಟಿ ಇಡುವುದು ಹೇಗೆ...ಅಲ್ಲವೇ...?
.
ಕೊನೆಗೆ ಅದಾಗ ತಾನೆ  ಸೋಪಾನವಾಗಿ ಪರಿವರ್ತಿಸಿದ ಒಂದು ಜಾಗವೇ ಈ ಗಿಡದ ನೆಲೆಯಾಗಲಿ ಎಂದು ತೀರ್ಮಾನವೂ ಆಯಿತು, ಮತ್ತು ಅದೇ ದಿನ ಜೋಪಾನವಾಗಿ ಅಪ್ಪ ಅಮ್ಮನ ಜೊತೆ ಗಿಡ ನೆಡಲಾಯಿತು. 
ಗಿಡ ಪುಟ್ಟದಾಗಿದೆ ಅಲ್ಲವೆ? ಆಗ ಅದರ ಮೇಲೆ ಮನೆ ಕೆಲಸದವರಾಗಲಿ , ಮಕ್ಕಳಾಗಲಿ ತಿಳಿಯದೆ ತುಳಿದು ಬಿಡಬಾರದು. ಹಾಗಾಗಿ ಅದರ ಸುತ್ತ ಉದ್ದುದ್ದದ ಕೋಲುಗಳನ್ನು ನೆಟ್ಟು ಒಂದು ಬೇಲಿಯನ್ನೂ ಕಟ್ಟಲಾಯಿತು.
.
ದಿನ ನಿತ್ಯದ ಜೀವನದ ಅಂಶವಾಗಿ ಗಿಡ ಬದಲಾದಾಗ ಇದೆಲ್ಲ ದಿನಚರಿಯ ಪುಟವನ್ನು ಸೇರತೊಡಗಿತು. ಸ್ವಪ್ನಾ ಟೀಚರ್ ಈ ದಿನಚರಿ ಅದೇ ಪ್ರೀತಿಯಿಂದ ಓದಿ #saga of ಸಾಗುವಾನಿಯ  ಭಾಗವಾಗದರು.

.

ಈ ಸಾಗುವಾನಿ ಗಿಡಕ್ಕೆ ಬೇರೇನೂ ಆರೈಕೆಯೂ ಬೇಕಿರಲಿಲ್ಲ.ಮಳೆಗಾಲವಾದ್ದರಿಂದ ಕನಿಷ್ಟ ಪಕ್ಷ ನೀರು ಕೂಡ ಅದಕ್ಕೆ ನೀಡುವ ಅಗತ್ಯ ನಮಗಿರಲಿಲ್ಲ. ಈಗಿನ ವರ್ತಮಾನ ಪರಿಸ್ಥತಿಯಲ್ಲಿ ಹೇಳುವುದಿದ್ದರೆ ಈ ಸಾಗುವಾನಿ ಗಿಡ ಆತ್ಮನಿರ್ಭರತೆಯ ಪ್ರತೀಕವಾದಂತಿತ್ತು. ಅಂದರೆ ಅದು ಯಾರಿಂದಲೂ ಏನನ್ನೂ ಬಯಸುತ್ತಲೇ ಇರಲಿಲ್ಲ. ಆದರೆ ಇದಕ್ಕಾಗಿ ಏನಾದರೂ ಮಾಡಲೆ ಬೇಕೆಂಬ ಅದಮ್ಯ ಆಸೆಯಾಗಿತ್ತು ಗೀತಳದು.
.
ಹೀಗಾಗಿ pampering the plant ಎಂದು ಅದಕ್ಕೆ ಗೊಬ್ಬರ ನೀಡಲಾಗುತ್ತಿತ್ತು. ದಿನ ನಿತ್ಯ ಮಾತನಾಡಲಾಗುತ್ತಿತ್ತು ಮತ್ತು ಶಾಲೆಯ ಕತೆಗಳನ್ನು ಕೇಳಿಸಲಾಗುತ್ತಿತ್ತು.ತನ್ನ ಕವಿತೆಗಳನ್ನು ಅದರ ಜೊತೆ ಹಂಚಲಾಗುತ್ತಿತ್ತು.
.

ಹೀಗೆ ಗಿಡದ ಪ್ರತಿ ಚಿಗುರಿಗೆ, ಎಲೆಯ ಸೌಂದರ್ಯಕ್ಕೆ , ಬೆಳೆಯುವ ಮೋಡಿಗೆ ಗೀತ ಕಣ್ಣಾದಳು, ನಗುವಾದಳು, ಸಂಭ್ರಮವಾದಳು.ಹುಳ ತಿಂದ ಎಲೆ ಕಂಡು ಆಗಾಗ ಅಳುವೂ ಆದಳು.ಅದರ ಜತನದ ಆಳಾದಳು.ಜೊತೆಗೆ ತಾನೂ ಬೆಳೆದಳು.ಆದರೆ ಗಿಡ ಬೆಳೆದು ಅವಳಿಗಿಂತ ಉದ್ದವಾಯಿತು. ಗೆಳೆಯರ ಹೂಗಿಡದ ಹೂ ಕಂಡರೂ ಈಗ ಗೀತಳಿಗೆ my tribe and vibe both are different ಅಂತ ತಿಳಿದಿತ್ತು.
.
ಗಿಡ ನಿರಂತರ ಬೆಳೆದು ಅವಳಿಗಿಂತ ಉದ್ದವಾದ ದಿನ ಅವಳಿಗಾದ ಸಂತಸ ಅಷ್ಟಿಷ್ಟಲ್ಲ.
ಹೀಗೆ ಬೆಳೆದ ಗಿಡ ಗಾಳಿಗೆ ಬಗ್ಗುತ್ತಿತ್ತು, ಇದಕ್ಕಾಗಿ ಕೋಲೊಂದನ್ನು ಇದಕ್ಕೆ ಆಧಾರವಾಗಿ ಕೊಡಲಾಯಿತು. ಅಜ್ಜನ ಮನೆಗೆ ತೆರಳುವಾಗ ಗಿಡದ ಕಾಯುವಿಕೆಯ ಹೊಣೆ ಮನೆಯ ಅಜ್ಜನ ಹೆಗಲೇರುತ್ತಿತ್ತು.ಇದರೆಡೆಯಲ್ಲಿ ಆ ಸೋಪಾನದಲ್ಲಿ ಮತ್ತೆ ಅಡಿಕೆ ಗಿಡ ನೆಡುವ ಕುರಿತು ಮಾತುಕತೆ ನಡೆದಾಗ ಮಾಡಿದ ಚಿಂತನ ಮಂಥನವೆಷ್ಟೋ ಕಾಣೆ! ಆದರೂ ಸಾಗುವಾನಿಯ ಜಾಗ ಅದಕ್ಕಾಗಿ ಮೀಸಲಿಡುವಲ್ಲಿ ಗೀತಾ ಯಶಸ್ವಿಯಾಗಿದ್ದಳು.
.
ಹೀಗೆ ವರುಷಗಳುರುಳಿ ದೂರದ ರೆಸಿಡೆಂಶಿಯಲ್ ಸ್ಕೂಲ್ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಗೀತಾ ತೆರಳುವುದು ಖಚಿತವಾಯಿತು.ಮನೆ-ಮಂದಿಯನ್ನು ಬಿಟ್ಟು ಹೋಗುವಷ್ಟೆ ದುಃಖ ತನ್ನ ಏಳು ವರ್ಷಗಳ ಸಂಗಾತಿಯನ್ನು ಬಿಡುವಾಗಲೂ ಇತ್ತು.ಕೊನೆಗೆ ಹಲವು ಮಾತು-ಮೌನ-ಕಸಿವಿಸಿಗಳ ಬಳಿಕ ಅಲ್ಲಿಗೆ ತೆರಳುವಂತಾಯಿತು. ಗಿಡ ಒಂಟಿಯಾದಂತಿತ್ತು...ಗೀತಳೂ!
.
ಇಷ್ಟರಲ್ಲಿ ಮತ್ತೊಂದು ಮಳೆಗಾಲವೂ ಬಂತು, ಮಳೆ ಸುರಿಯಿತು,ಮತ್ತದೇ ರಭಸದ ಗಾಳಿ! ಗಿಡ ತುಂಬ ಉದ್ದ ಬೆಳೆದಿತ್ತಾದರೂ ಅಗಲದ ಕಾಂಡ ಅದಕಿರಲಿಲ್ಲ! ಅದು ಮರವಾಗಿರಲಿಲ್ಲ! ಈ ಬಾರಿ ಅಪ್ಪ ಮತ್ತು ಅಜ್ಜ ಕೊಟ್ಟ ಆಧಾರವೂ ಗಾಳಿಗೆ ಉಳಿಯಲಿಲ್ಲ. ಗಾಳಿಯ ರಭಸಕ್ಕೆ ಗಿಡ ಬಗ್ಗಿ ಮುರಿಯಿತು!
.
ಆ ಜುಲೈ ತಿಂಗಳ ಮೊದಲ ವಾರದಲ್ಲಿ ಶಾಲೆಯಿಂದ ಪರ್ಮೀಷನ್ ಕೇಳಿ ಗೀತ ಮನೆಗೆ ಬಂದಾಗ ಗಿಡವಿರಲಿಲ್ಲ. ಈಗ ಕನಸಷ್ಟೇ ಉಳಿದಿದೆ.. ಅದೂ ನೆನಪಾಗಿ.ತೂ ಕರಮ್ ಕರ್ ಫಲ್ ಕಿ ಚಿಂತಾ ನ ಕರ್  ಎಂಬುದು ಅವಳಿಗೆ ಅರಿವಾಯಿತು. ಮುನ್ನಡೆಯುವ ಬೆಳಕಾಯಿತು. ಬದುಕಿನ, ಬೆಳವಣಿಗೆಯ  ಗುಟ್ಟಾಯಿತು. ಈಗ ಅದೇ ಜಾಗದಲ್ಲಿ ಅಪ್ಪ ಮಾವಿನ ಸಸಿ ನೆಟ್ಟಿದ್ದಾರೆ.

ಆ ಮಳೆಗಾಲದಲ್ಲೂ ಬೇರೆ ಯಾರಿಗಾದರೂ ಸಾಗುವಾನಿ ಗಿಡ ಸಿಕ್ಕಿರಬಹುದೇನೊ.ಇದೇ ಪ್ರೀತಿ ಬೇರೆ ಯಾರಲ್ಲಾದರೂ ಮೊಳಕೆಯೊಡೆದಿರಬಹುದೇನೊ..ಗಿಡ ಮತ್ತು ಕನಸುಗಳೆರಡೂ ಬೆಳೆದಿರಬಹುದೇನೋ..ಮಾತಿಲ್ಲದ ಪ್ರೇಮ ಚಿಗುರಿರಬಹುದೇನೋ!
.
ಇನ್ನೂ ಪ್ರತಿ ಮಳೆಗಾಲ ಯಾರಿಗಾದರೂ ಸಾಗುವಾನಿ ಸಿಗಲಿ..ಈ saga ಹೀಗೆಯೇ ಮುಂದುವರಿಯಲಿ, ಗೀತಳ ಸಾಗುವಾನಿಯ ನೆಲೆ ನನ್ನ ನೆನಪಿನಲ್ಲೆಂದಿಗೂ ಇರಲಿ!!!
ಜೊತೆಗೆ ಇದಕೆಲ್ಲ ನೆಪ - ನಿಮಿತ್ತ -ಕಾರಣ ಪ್ರೀತಿಯಾಗಿರಲಿ💚💚


~Geethalakshmi Kochi

3 comments:

  1. ದೃಷ್ಟಾಂತ ಸ್ವಾದಿಷ್ಟವಾಗಿದೆ..
    ಕತೆ ಹೇಳುತ್ತಲೇ,
    ಪರಿಸರ ಕಾಳಜಿ, ನಿಸರ್ಗ ಪ್ರೇಮ, ಮಾತಿಲ್ಲದ ಪ್ರೇಮವನ್ನು ಚಿಗುರುವಂತೆ ಮಾಡಿದಿರಿ!
    ಅಮೋಘ ಬರೆವಣಿಗೆ..
    Saga, ಸಾಗಲಿ✍️

    ReplyDelete
  2. ಒಂದು ಮುಗ್ಧ ಬರವಣಿಗೆ .. ಎಷ್ಟೋ ಮಕ್ಕಳಲ್ಲಿ ಇಂತಹ ಕನಸುಗಳು ಮೂಡಿ ಮರೆಯಾಗಿರುತ್ತವೆ.. ಬಾಲ್ಯ ಸಹಜ ಭಾವಗಳು.. ಪರಿಸರ ಕಾಳಜಿಯ ಸಂದೇಶವೂ ಒಳಗೊಂಡಂತಹ ಈ ಬರಹ ಉತ್ತಮವಾಗಿದೆ..

    ReplyDelete

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...