Sunday 12 November 2017

ತೋಚಿದ್ದು ಗೀಚಿದ್ದು....

ಕತ್ತಲ ಜಗತ್ತಿನಲ್ಲಿದ್ದ ನನ್ನನ್ನು ಬೆಳಕಿನ ಕಡೆಗೆ ಕೈ ಹಿಡಿದು ನಡೆಸುವ ಪುಟ್ಟ ಹಣತೆ ನನ್ನ ಕವಿತೆ. ಅದು ಕೊಡುವ ಇಷ್ಟಿಷ್ಟೇ ಬೆಳಕಿನಿಂದ ನಾಲ್ಕಕ್ಷರ ಗೀಚುವಂತಾಗಿದೆ.ಕವಿತೆ ಮನದ ಮಾತನ್ನು ಸದ್ದಿಲ್ಲದೇ ಬಿಚ್ಚಿಡುತ್ತದೆ.ಒಂಟಿತನ
ಕಾಡಿದಾಗ ಅಪ್ಪಿಕೊಳ್ಳುತ್ತದೆ.

ಕವಿತೆ ಕಟ್ಟುವುದಲ್ಲ , ಹುಟ್ಟು ವುದು. ಅಮ್ಮ ತೋರಿದ ತಾರೆ, ಚಂದಮಾಮ, ಮರ,ಚಿಟ್ಟೆ, ಅಪ್ಪ ನೆಟ್ಟ ಗಿಡದ ಕುರಿತು ನನ್ನ ಕಾಳಜಿ ಕುತೂಹಲ ನನ್ನ ಮೊದಮೊದಲ ಕವಿತೆಗಳಿಗೆ ನಾಂದಿಯಾಯಿತು. ಬರೆದ ಕವಿತೆಗಳನ್ನು ಅಕ್ಕನಿಗೆ ತೋರಿಸಿದಾಗ ನನ್ನ ಕನಸುಗಳನ್ನು ನಿನ್ನ ಗೆಜ್ಜೆಯಲ್ಲಿಟ್ಟಿರುವೆ ಜೋಪಾನ ಎಂದ ಮಾತು ಹೊಸ ಹುಮ್ಮಸ್ಸು ನೀಡಿತು.

ಈ ಪ್ರೋತ್ಸಾಹದ ನೆರಳಿನಲ್ಲಿ 12ನೇ ವಯಸ್ಸಿನಲ್ಲಿ ನನ್ನ ಚೊಚ್ಚಲ ಕವನ ಸಂಕಲನ "ಹಸಿರು" ಪ್ರಕಟಗೊಂಡಿತು.ಅದರ ಬಳಿಕ ನಾಲ್ಕಾರು ಪ್ರಶಸ್ತಿಗಳು ಕೈ ಸೇರಿದವು. ಮುಂದೆ ನನ್ನ ಶಾಲೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಹತ್ತು ಹಲವು ಸಾಹಿತ್ಯ ಚಟುವಟಿಕೆಗಳಿಗೆ ಸಾಕ್ಷಿಯಾದೆ.ಇದು ನನ್ನ ಬರವಣಿಗೆಗೆ ಹೊಸ ಆಯಾಮ ನೀಡಿತು.

ಇದರ ಫಲವಾಗಿ ನನ್ನ 2ನೇ ಕವನ ಸಂಕಲನ "ಝಲ್ಲನೊಂದು ಮಳೆ" ಬಿಡುಗಡೆಯಾಯಿತು.ಈಗ ಮತ್ತೆ ನನ್ನ ಬರಹಗಳು ಕೊಡುವ ಅರೆ ಬೆಳಕಿನ ಬಲದಲ್ಲಿ ನಿಮ್ಮ ಮುಂದೆ ಬರುವಂತಾಗಿದೆ.ಬೆಳಕು ಹರಡಿದಂತೆ ದೃಷ್ಟಿ ವಿಸ್ತಾರವಾಗುತ್ತದೆ.ಆದರೆ ಇಲ್ಲಿ ಯಾವುದೂ ಸ್ಥಿರವಲ್ಲ.ಇರುವ ಬೆಳಕಿನಲ್ಲಿ ಇರುವಷ್ಟು ದಿನ ಎಷ್ಟು ನೋಡುತ್ತೇವೋ ಅಷ್ಟು ಸಲ್ಲುತ್ತದೆ. ಜಿ.ಎಸ್ ಶಿವರುದ್ರಪ್ಪನವರು ಹೇಳಿದಂತೆ,

ಹಣತೆ ಹಚ್ಚುತ್ತೇನೆ ನಾನು
ಕತ್ತಲೆ ಕಳೆಯುತ್ತೆನೆಂಬ ಭ್ರಮೆಯಿಂದಲ್ಲ
ಅದು ಇರುವಷ್ಟು ಹೊತ್ತು ನಿನ್ನ ಮುಖ ನಾನು
ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ ನೀನು ಯಾರೋ
ಮತ್ತೆ ನಾನು ಯಾರೋ..‌...



 ~Geethalakshmi Kochi

9 comments:

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...