Wednesday 6 May 2020

ಅವನಿ ಅವನಿಗಾಗಿ..

ಎಲೆ ನಭವೆ ಕೇಳಿ
ಬಿಡು ಎನ್ನ ಸಂದೇಶ
ನನ್ನೊಳಗೆ ಕುದಿಯುತಿಹ
ಭಾವ- ಆವೇಶ

ನೂರಾರು ಮಾತುಗಳು
ಮತ್ತೆ ಮೌನದ ಚಿತ್ತ
ಅತ್ತಿತ್ತ ಕೆಲ ನಲ್ಮೆ
ಮತ್ತೆ ತಾಳ್ಮೆಯ ಚಿತ್ರ

ತಲ್ಲಣದ ತಬ್ಬಿಬ್ಬು
ಜೊತೆಗಿಷ್ಟು ಆರೋಪ
ಮತ್ತಿಷ್ಟು ಮರುಳಾಟ
ಪ್ರಣಯ ಸಲ್ಲಾಪ

ನಿನ್ನ ಮುಗಿಲಿನ ನೀರ
ಸಾಗಿಸಿದೆ ಸಾಗರಕೆ
ಎನ್ನಂತರಗವನು
ಅದಕೆ ಬಸಿದೆ

ಗುಡ್ಡ ಕಾಡಿನ ಕವಿತೆ
ಕದಡಿಹುದು ಅದರಲ್ಲಿ
ಹಳ್ಳಿ ದಿಲ್ಲಿಯ ಗುಲ್ಲು
ಬೆರೆತಿಹುದು ಅಲ್ಲಿ

ಕಡಲೊಡಲು ಇರಬಹುದು
ಸಾರ ಅಭಿಸಾರದಲಿ
ಆವಿಯನು ನೀ ಸಲಹು
ವಾತ್ಸಲ್ಯದಲ್ಲಿ

ಮುಗಿಲುಗಟ್ಟಿದ ದಿಗಿಲ
ಕೇಳ ಬಯಸುವೆ ನಾನು
ಹಂಚಿ ಹಗುರಾಗೋಣ
ಸುಖ ದುಃಖವನ್ನು

ನಿನ್ನ ಪ್ರೀತಿಯ ಪರಿಯ
ದ್ರವವಾಗಿ ಹರಿಯಬಿಡು
ನಿನ್ನ ಮಾತನು ಎನಗೆ
ಮಳೆಯಾಗಿ ಕಳಿಸಿಕೊಡು

ಬಣ್ಣವಾಗಲಿ ಬದುಕು
ಬಳುವಳಿಯು ಒಲವು
ಉಭಯಕುಶಲೋಪರಿ 
ಮತ್ತೆ ಅಲ್ಲಿ ಸಾಂಪ್ರತವು

~Geethalakshmi Kochi

No comments:

Post a Comment

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...