Wednesday 24 June 2020

ನೆನಪುಗಳ ತೂಗುಯ್ಯಾಲೆ ತೂಗಿ...



ಬಾಲ್ಯದಿಂದ ಇಂದಿನ ವರೆಗೂ ಗೀತಳ ಅವಿಚಲಿತ ಅಥವಾ ಅಚಲ ಪ್ರೀತಿ ಎಂದರೆ ಉಯ್ಯಾಲೆ. ಯಾವುದೇ ಖುಷಿಗಳನ್ನು ಸಂಭ್ರಮಿಸುವುದಕ್ಕೆ ಅಥವಾ ದುಃಖವನ್ನು overcome ಮಾಡುವ ಪ್ರಯತ್ನಕ್ಕೆ , ಓದುವುದಕ್ಕೆ, ಚಿಂತಿಸುವುದಕ್ಕೆ ಇದಕ್ಕಿಂತ ನೆಚ್ಚಿನ ಜಾಗ ಇನ್ನೊಂದಿರಲಿಲ್ಲ.ಮೂರನೇ ತರಗತಿಯಲ್ಲಿ ಜೋಕಾಲಿಯಲ್ಲಿ ಕುಳಿತು ಬರೆದ ಕಾಪಿಯಲ್ಲಿ ಅಕ್ಷರ ದುಂಡು ದುಂಡಾಗಿಲ್ಲವೆಂಬ  ಕಾರಣಕ್ಕೆ rewrite this! ಎಂಬ ರಿಮಾರ್ಕ್ ಕೂಡ ಸಿಕ್ಕಿದೆ .

ಇಂಥಹಾ ಬಾಲ್ಯದ ಉಯ್ಯಾಲೆ ಎಂದರೆ ಅಂಗಡಿಯಿಂದ ತಂದದ್ದೇನೂ ಅಲ್ಲ. ಗೀತಳ ಕೊಠಡಿಯ ಹಿಂಭಾಗದ ಸೀತಾಫಲದ ಮರದ ಕೊಂಬೆಗೆ ಅವಳ ಅಮ್ಮನ ಹಳೆಯ ಸೀರೆಯಿಂದ ಅಪ್ಪ ಕಟ್ಟಿ ಕೊಟ್ಟದ್ದು. ಅವತ್ತೆ ಹೇಳಿದಂತೆ ಸಾಗುವಾನಿ ಮರ ಅವಳು ಮುದ್ದಿಸಿದಂಥದ್ದಾದರೆ , ಸೀತಾಫಲದ ಮರ ಅವಳನ್ನು ಮುದ್ದಿಸಿದ್ದು, ತೂಗಿದ್ದು, ಹಣ್ಣು ನೀಡಿದ್ದು.
....

ಇನ್ನು ಉಯ್ಯಾಲೆಯಲ್ಲಿ ಮಾಡಿದ ಕಸರತ್ತು ಅಂಥಿಂಥದ್ದಲ್ಲ. ನೆಲವನ್ನು ಮೆಟ್ಟುವ ರಭಸಕ್ಕೆ ಸುಮಾರು ಎದುರಿನ ರೆಂಬೆಗೆ ತಾಗುವಷ್ಟು ಮೇಲೆರುತ್ತಿತ್ತದು. ಪೂರ್ಣ ಮರವೇ ಅಲುಗಾಡುತ್ತಲು ಇತ್ತು.ಅದರ ಒಂದು ಭಾಗ ಮನೆಯ ಒಂದು ಭಾಗದ ಕಬ್ಬಿಣದ ಶೀಟ್ ಗೆ ತಾಗಿ ಶಬ್ದವೂ ಬರುತ್ತಿತ್ತು.
...
ಒಂದು ದಿನ ಆ ಜೋಕಾಲಿಯಲ್ಲಿ ಉಲ್ಟಾ ಮಲಗಿ ಗೀತಾ ಅದರಲ್ಲಿ ಸಿಕ್ಕಿ ಹಾಕಿಕೊಂಡದ್ದೂ ಇದೆ. ಉಸಿರೆಳೆಯಲು ಅಥವಾ ಯಾರನ್ನಾದರೂ ಕರೆಯಲು ಕೂಡ ಅವಳಿಗೆ ಅಂದು ಕಷ್ಟವಾಗಿತ್ತು. ಕೊನೆಗೆ ಅಮ್ಮ ಬಂದು ಬಿಡಿಸಿ ಜೋರು ಮಾಡಿದ್ದು ಕೂಡ ನಿಜ. ಇದರಿಂದ ಏನಾದರೂ ಉಪಯೋಗವೋ ಪ್ರಯೋಜನವೋ ಆಗಲಿಲ್ಲ ಎನ್ನುವಂಥದ್ದೂ ಅಷ್ಟೇ ನಿಜ.
ಶಾಲೆಯಿಂದ ಬಂದ ನಂತರ, ಶಾಲೆಗೆ ಹೋಗುವ ಮೊದಲು ಎಲ್ಲವೂ ಅವಳು ಸಾಧಾರಣ ಉಯ್ಯಾಲೆ ತೂಗುತ್ತಲೇ ಇರುತ್ತಿದ್ದಂಥವಳವಳು.ಇದಕ್ಕಾಗಿಯೇ ಓಡೋಡಿ ಶಾಲೆಯಿಂದ ಬಂದದ್ದೂ ಇದೆ. ಬೆಳಗ್ಗೆ ಬೇಗ ಏಳಲು ಒಂದು ಕಾರಣ ಇದೂ ಆಗಿತ್ತು.ಅಷ್ಟೇ ಏಕೆ , ಕಲೋತ್ಸವಗಳಂಥ ಸ್ಪರ್ಧೆಗಳಿಗೆ ತಯಾರಿ ಅಂದ್ರೆ ಹಾಡು, ಕಥೆ ಹೇಳುವುದು ,ಭಾಷಣಗಳ ತಯಾರಿಯಿಂದ ಪರೀಕ್ಷೆಗೆ ಓದುವ ಜಾಗವೂ ಇದೇ ಆಗಿತ್ತು.
Coolest work place ever ಅಲ್ವಾ?
...
ಈ ಉಯ್ಯಾಲೆ , ಮರ ಮತ್ತು ಸುತ್ತಲ ಪ್ರದೇಶ ಒಂದು ರೀತಿ ಅವಳ ಅಧಿಪತ್ಯದ ಜಾಗವಾಗಿತ್ತು ಎಂದರೆ ತಪ್ಪಾಗಲಾರದು. ಅದರಲ್ಲಿ ಇನ್ಯಾರಿಗಾದರೂ ತೂಗುವ ಆಸೆ ಏನಾದರೂ ಇದ್ದರೂ ಗೀತಳ ಸಮ್ಮತಿ ಬೇಕಿತ್ತು, ಸಾಧಾರಣವಾಗಿ ಅವಳು ಇಂಥ ಅನುಮತಿ ಕೊಡುತ್ತಿರಲಿಲ್ಲ.ಕೊಟ್ಟರೂ ಹೆಚ್ಚು ಹೊತ್ತು ತೂಗುವ ಅವಕಾಶ ಯಾರಿಗೂ ಇರುತ್ತಿರಲಿಲ್ಲ.ಇದರ ಬಗ್ಗೆ ತೀರ ಪೊಸೆಸಿವ್ ಎನ್ನುವಂಥ ಮನೋಭಾವ.


........

ಆದರೆ ಸುಮಾರು ಅವಳು ಆರನೇ ತರಗತಿ ಮುಗಿಸಿ ಏಳು ಶುರುವಾಗುವಷ್ಟರಲ್ಲಿ ಮನೆಯ ನವೀಕರಣ ಮಾಡುವ ತೀರ್ಮಾನ ಮಾಡಲಾಯಿತು. ಇಂಥದ್ದರಲ್ಲಿ ನಾಲ್ಕರಿಂದ ಐದು ಹೊಸ ಕೊಠಡಿಯ ನಿರ್ಮಾಣ ಕ್ಕೂ ಸಿಧ್ಧತೆ ಮಾಡಲಾಗಿತ್ತು.
ಪ್ಲಾನ್ ನ ಪ್ರಕಾರ ಸೀತಾಫಲದ ಮರವನ್ನು ಕಡಿಯುವುದು ಅನಿವಾರ್ಯವಾಗಿತ್ತು.
....
ಗೀತಳಿಗೆ ದುಃಖವಿದ್ದದ್ದು ನಿಜ, ಆದರೆ ಹೊಸ ರೂಮ್ ಸಿಗುತ್ತದೆ ಎನ್ನುವ ಆಮಿಷವೂ ಇತ್ತು.ಮನಸ್ಸಿನಲ್ಲಿ ಬೇಕು ಬೇಡಗಳ ಗೊಂದಲಗಳ ನಡುವೆ ಕೊನೆಗೆ ಮನೆಯವರೆಲ್ಲರ ನಿರ್ಧಾರದಂತೆ ಅದನ್ನು ಕಡಿಯಲಾಯಿತು. ಮನೆಯ ನವೀಕರಣವನ್ನೂ ಪೂರ್ತಿ ಮಾಡಲಾಯಿತು
ಮೊದಮೊದಲು ಹೀಗೆ ಹೊಸತನದ ಹುರುಪಿದ್ದರೂ ಅವಳಿಗೆ ತೀರಾ ಹತ್ತಿರವಾದ , ನೆಚ್ಚಿನ ಉಯ್ಯಾಲೆ ಮತ್ತು ಮರ ಇಲ್ಲವಾದ ವಿಚಾರ ಅವಳನ್ನು ನಿತ್ಯ ಕಾಡತೊಡಗಿತ್ತು ಅಥವಾ ಇಂದಿಗೂ ಕಾಡುತ್ತಿದೆ.
.....
ಎಂಟನೆಗೆ ವಸತಿಶಾಲೆಗೆ ಸೇರಿದ ಬಳಿಕ ರಜೆಯಲ್ಲಿ ಮನೆಗೆ ತೆರಳುವಾಗಲೂ ಅಂಗಳದಲ್ಲಿ ಎಲ್ಲದಕ್ಕಿಂತ ಮೊದಲು ಕಾಣುತ್ತಿದ್ದ ಸೀತಾಫಲ ಮರವಿರುತ್ತಿರಲಿಲ್ಲ. ಬದಲಿಗೆ ಕಿಟಕಿಯೊಂದು ಕಾಣುತ್ತಿತ್ತು..ಅದೂ ಸಾಧಾರಣ ಅಂಗಳದ ಧೂಳು ಬರಬಾರದೆಂಬ ಕಾರಣಕ್ಕೆ ಮುಚ್ಚಿರುತ್ತಿತ್ತು.
.....
ಈಗ ಆ ಉಯ್ಯಾಲೆ ಮತ್ತು ಮರ ಇಲ್ಲವಾಗಿ ಸುಮಾರು 9 ವರ್ಷಗಳು ಕಳೆದಿವೆ. ಗೀತಾ ಮಹಾನಗರ ಸೇರಿದ್ದಾಳೆ.
 ಅವಳ ಅಕ್ಕನ ಮಗು ಮನೆಯಲ್ಲಿ ಉಯ್ಯಾಲೆ ತೂಗುತ್ತಾಳೆ. ಅದರಲ್ಲಿ ಮಿಕ್ಕಿ ಮೌಸ್ನ ಚಿತ್ರವೂ ಇದೆ. ಬಹುಶಃ ಅವಳೂ  ಅದನ್ನು ಪ್ರೀತಿಸುತ್ತಾಳೆ ಅನಿಸುತ್ತದೆ.ಗೀತಾ ಪಾರ್ಕ್ ಗಾರ್ಡನ್ಗಳ ಉಯ್ಯಾಲೆ ತೂಗಲು ಅಲ್ಲಿ ಆಡುವ ಮಕ್ಕಳಿಲ್ಲದ ಸಮಯ ಅಂದರೆ ಬೆಳಗ್ಗೆ ತೆರಳುತ್ತಾಳೆ.
.......


ಆದರೆ ಅಮ್ಮನ ಸೀರೆಯಿಂದ ಸೀತಾಫಲದ ಮರಕ್ಕೆ ಕಟ್ಟಿದ ಜೋಕಾಲಿಯ ಅನುಭೂತಿ ಇಲ್ಲ. ಅಂದ್ರೂ  ಉಯ್ಯಾಲೆ ಗೀತಾಳಿಗೆ ಇಂದಿಗೂ ಪ್ರಿಯ.
ಯಾಕಿರಬಹುದು ? ಯೋಚಿಸಿದೆ.
ಒಳಮನಸ್ಸು ಉಸುರಿದ್ದು ಇಂತಿದೆ:ತೂಗುಯ್ಯಾಲೆ ದೂರ ದಿಗಂತವನೇರಿಸಿದಂತೆ
ಜೀವನ ಜೀಕಿ ಧರೆಯನು ಮೀಟಿ ಆಗಸದ ಅಂಶ ನಾನಾದರೆ, ಭೂಮಿಯ ಬಯಕೆ
ನನಗೇಕೆ...ನನ್ನ ದೃಷ್ಟಿಯಲ್ಲಿ ಸೃಷ್ಟಿ ಸಾರ್ವಭೌಮವೇಕೆ! ದೃಷ್ಟಿಕೋನ ಬದಲಿಸಿ ದಾರ್ಶನಿಕತೆಗೆ ದೃಷ್ಟಾಂತ ಬರೆಯಬಹುದೇನೋ..ನೀಲಿಯಲಿ ನಿರಂತರ ತೇಲಬಹುದೇನೊ!
ಗೀತಳೂ ಹೀಗೆ ಯೋಚಿಸಿರಬಹುದು ,ಬಹುಶಃ ಉಯ್ಯಾಲೆಯೂ💟





-Geethalakshmi Kochi

No comments:

Post a Comment

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...