Sunday 10 June 2018

ನಡೆದಷ್ಟು ದಾರಿ...

    ಬದುಕಿನ ಜಾಡು ಹಿಡಿದು

ಭಾಗ-೧





ಅವತ್ಯಾಕೋ ಅಚಾನಕ್ಕಾಗಿ ಮಳೆ ಸುರೀತು.ಮನೆ ಮಾಡಷ್ಟೇ ಅಲ್ಲ;ಮನಸ್ಸೂ ಸೋರುತ್ತಿತ್ತು.ನಾವು ಮೂವರೂ ಜೊತೆಗೇ ಇದ್ವಿ.ನಾವು ಅಂದ್ರೆ ಆದಿತ್ಯ, ಆರ್ಯಾಹಿ ಮತ್ತು ನಾನು-ಅಷ್ಮಾಯು.ನಾವು ಕಸಿನ್ಸ್. ಒಬ್ಬರಿಗೊಬ್ಬರು ಜೀವ. ನಾಲ್ಕು ವರ್ಷಗಳ ನಂತರ ಸಿಗ್ತಾ ಇದ್ದೇವೆ.
        ಆದಿತ್ಯ ಇಂಜಿನಿಯರಿಂಗ್ ಮಾಡಿ ಅಮೇರಿಕಾದಲ್ಲಿ ಸೆಟ್ಲ್ಲಾದವನು.ನಾನು ಎಂ.ಬಿ.ಎ ಮಾಡಿ 
ಬೆಂಗಳೂರಿನಲ್ಲೇ ಇದ್ರೆ ಆರ್ಯಾಹಿ ಎಲ್ಲಿರ್ತಾಳೆ ಅಂತ  ಯಾರಿಗೂ ಐಡಿಯಾ ಇರ್ಲಿಲ್ಲ.೧೦ನೇ ತರಗತಿಯ ನಂತ್ರ ತನ್ನ ಕ್ಯಾಮೆರಾ ಜೊತೆ ಮನೆ ಬಿಟ್ಟವಳು ವಾಪಸ್ಸು ಬಂದದ್ದು ಇವಾಗ್ಲೆ. ಆವಾಗ ಇವಾಗ ಕಾಲ್ ಮಾಡ್ತಾ ಇದ್ರೂ ಇವಳೆಲ್ಲಿದ್ದಾಳೆ ಅಂತ ಹೇಳ್ತಾನೆ ಇರ್ಲ್ಲಿಲ್ಲ. ಪೇರೆಂಟ್ಸ್  ಬೆಂಗಳೂರಿನಲ್ಲಿದ್ರೂ ನಾವು ನಮ್ಮ reunion 
ಪ್ಲಾನ್ ಮಾಡಿದ್ದು ಕೊಡಗಿನ ಒಂದು ಹಳೇ ಮನೆಯಲ್ಲಿ.
                    ಆಗ್ಲೇ ಮಳೆ ಬರ್ತಾ ಇದೆ ಅಂದ್ನಲ್ಲ.ಆದ್ರೆ ಆ  ಫೀಲಿಂಗ್ ಇರ್ಲಿಲ್ಲ.ಮಳೆ ಝಲ್ಲೆನಿಸಲಿಲ್ಲ!!ಗುಡುಗೂ ಹೆದರಿಸಲಿಲ್ಲ.ಕನಸು?ಮೊದಲೇ ಕರಗಿತ್ತಲ್ಲ.ಚಿಗುರುವ ಹಾಗೆ ಕಾಣಿಸಲಿಲ್ಲ. ಹೀಗಿರುವಾಗ  ನಿಮ್ಗೇ ನಮ್ಮ ಮೂವರ 
ಲೈಫಲ್ಲು ಏನೇನೋ ಪ್ರಾಬ್ಲಮ್ಸ್ ಇದೆ ಅಂತ ಗೊತ್ತಾಗುವಾಗ ನಮ್ಗೂ ಗೊತ್ತಾಗ್ಲೇ ಬೇಕು!
                                ಸಡನ್ನಾಗಿ ಆರ್ಯಾಹಿ "ಬ್ಯಾಗ್ ಪ್ಯಾಕ್ ಮಾಡಿ, ಸಂಜೆ 6:30ಕ್ಕೆ ಹೊರಡೋಣ" ಅಂದ್ಳು.

ಎಲ್ಲಿ??
ಗೊತ್ತಿಲ್ಲ..
ಯಾಕೆ???
ಬದುಕು ಒಂದು ಪಯಣ ಎನ್ನುವುದು ಎಲ್ಲರೂ ಕೇಳಿರುವ ಫಿಲಾಸಫಿ. ಅದ್ರಲ್ಲಿ ಎಳ್ಳಷ್ಟಾದ್ರೂ ನಿಜ ಆಗಿದ್ರೆ ನಮ್ಗೆ ಈ ಪ್ರಯಾಣದಿಂದ ಏನಾದ್ರೂ ಸೊಲ್ಯೂಷನ್ ಸಿಗ್ಲೇ ಬೇಕು ಅಂದ್ಕೊಂಡೆ.
              
ಹೇಗಿದ್ರೂ ಮೂವರ ಬದುಕಲ್ಲೂ ಅರೆ ಕತ್ತಲೆ ಕವಿದಿರುವಾಗ ಅರೆಬೆಳಕ ಹಾದಿಯ ಯಾತ್ರೆ ಶುರುವಾಗ್ಲೇ ಬೇಕಿತ್ತು.

                                           (ಮುಂದುವರಿಯುತ್ತದೆ)

                ************************
~Geethalakshmi Kochi


   
     

Wednesday 30 May 2018

ಹೆಸರಿಡದ ಕವನ






ನನ್ನೊಳಗೆ ಬಲೆಯೊ ನಾನು ಬಲೆಯೊಳಗೊ
ಜಿಜ್ಞಾಸೆಯೊಂದು ಬಲಿತು ನಿಂತಿಹುದು
ಉತ್ತರವರಸಿ ಅರಗಿಸುವ ಮುನ್ನ
ಪ್ರಶ್ನೆಯೂ ಬಲೆಯೊಳಗೆ ಸಿಲುಕಿದಂತಿಹುದು

ಹೊರನೋಟ ಗೋಜಲು ಒಳನೋಟವೂ ಅಯೋಮಯ
ಅಡಿಯಿಟ್ಟಲ್ಲೆಲ್ಲ ಬರಿಯ ಗೌಜಿ ಗುಲ್ಲು
ಮೌನ ಕಟ್ಟೆಯನೊಡೆದು ಮಾತಿನರಮನೆ
ಕಟ್ಟಿದರೂ ; ಅರ್ಧವಷ್ಟೆ ಸತ್ಯ ಮಿಗಿದರ್ಧ ಸುಳ್ಳು

ಬದುಕು ಬಣ್ಣದ ಒಳಗೊ ಬಣ್ಣವೇ ಬದುಕೊ
ಬಣ್ಣನೆಯ ಬಣ್ಣದಾಚೆಯ ಬರಿಯ ಮಸಿಯೋ?
ಝಗಮಗಿಪ ಜಗವ ಜಾಲಾಡಿ ನೋಡಿದರೆ
ಮೃಗತೃಷ್ಣೆಯಂತೆ ಬರಿಯ ಹುಸಿಯೋ


~Geethalakshmi Kochi




Monday 16 April 2018

ಕನಸುಗಳು ಮಾರಾಟಕ್ಕಿವೆ ...!!

ಇದು ಮಹಾನಗರದ ಗಾಥೆ
ಬೆಳಕಿನ ಅಧಿಪತ್ಯ , ಶಾಸನ , ಒಡ್ಡೋಲಗ
ಕತ್ತಲೆ ಇಲ್ಲಿ ಪೂರ್ತಿ ಬೆತ್ತಲೆ....

ಗಗನಚುಂಬಿ ಕಟ್ಟಡದ
ಹವಾನಿಯಂತ್ರಿತ ಕೊಠಡಿಯಲ್ಲಿ
ಬಾಜಾರಿನ ಗಿಜಿಗಿಜಿ
ಗೌಜಿ ಗುಲ್ಲಿನಲ್ಲಿ
ವೇಗವನ್ನೂ ಮೀರಿಸ
ಹೊರಟ ಆವೇಗದಲ್ಲಿ..

ಬೆಳಕೇ ಚಾದರ ಬೆಳಕೇ ಹಾಸಿಗೆ
ಇರುಳು ಕೇವಲ ಹೆಸರಿಗೆ
ಕನಸು ಬಿಕರಿಯ ಬುಟ್ಟಿಗೆ....



~Geethalakshmi Kochi

Friday 16 March 2018

ಅಡಿಗರಿಗೆ...

ಕಟ್ಟುಪಾಡಿನ ಕಟ್ಟೆಯನ್ನೊಡೆದು
ಕಟ್ಟಿದಿರಿ ಹೊಸತೊಂದು ಕಾವ್ಯಪ್ರಪಂಚ
ನವ ನವ್ಯ  ಬಿತ್ತಿದಿರಿ;ಭವ್ಯತೆಯ ಪರಾಕಾಷ್ಠೆ --  ಯನೂ ಮೀರಿಸಿ
ಬರಹಕ್ಕೆ ನೀಡಿ ಹೊಸ ಕಾವ್ಯಮಂಚ

ಕಾವ್ಯಾಂತರಂಗದಲಿ ಭಾವಾಂತರಂಗ ಮೂಡಿಸುತ ತುಂಬಿದಿರಿ ನೂರಾರು ರಂಗುರಂಗ
ಕವಿತೆ ಕಟ್ಟುವ ಬದಲು ನವ ಕಾವ್ಯ ಹುಟ್ಟಿಸುತ
ಉರಿಸಿದಿರಿ ಎದೆಯೊಳಗೆ ಹೊಸತೊಂದು ಕಿಚ್ಚ

ಭೂಮಿ ಗೀತೆಯ ಹಾಡಿದಿರಿ ,ಮೋಹನ ಮುರಳಿಯ ಕರೆಯ ಕೇಳಿಸಿದಿರಿ  ಚಿಂತಾಮಣಿಯಲ್ಲಿ ಕಂಡ ಮುಖವ
ಬಣ್ಣಿಸಿದಿರಿ

ತಾವಿಟ್ಟ ಪ್ರತಿಯಡಿಯಲ್ಲೂ
ಬೆಳೆಯುತ್ತಲೇ ಹೋದಿರಿ
ಕನ್ನಡ ಕಾವ್ಯ ಕೃಷಿಯನ್ನು
ಬೆಳೆಸುತ್ತಲೇ ಹೋದಿರಿ
ಮತ್ತೆ, ಕನ್ನಡ ಕಾವ್ಯದ ಕಂಪ
ಪಸರಿಸುತ್ತಲೇ ಹೋದಿರಿ

~Geethalakshmi Kochi


Sunday 11 February 2018

ನಾನು ಬರೆಯುತ್ತೇನೆ...!

ನಾನು ಬರೆಯುತ್ತೇನೆ
ನನ್ನೊಡಲ ಕಳವಳದ ಕಡಲ
ಹುಟ್ಟುಹಾಕುವುದಕ್ಕೆ
ಸಂವೇದನೆಯ ಸಂವಾ-
ದಿಸುವ ಹಪಾಹಪಿಗೆ
ಮೌನವನು ಮಾತ-
ನಾಡಿಸುವ ಜಿದ್ದಾಜಿದ್ದಿಗೆ
ಬಿಡಲಾರದ ಹುಚ್ಚಿಗೆ
ಅಂತರಾಳದ ಕಿಚ್ಚಿಗೆ
ಕತ್ತಲ ಕೋಟೆಯಲಿ
ಬೆಳಕು ಬಿತ್ತುವುದಕ್ಕೆ
ಮತ್ತೆ ಬೆಳಕ ಭೇದಿಸಿ
ಕತ್ತಲಲಿ ಕಳೆದು ಹೋಗುವುದಕ್ಕೆ
ಅರೆಬೆಳಕ ಹಾದಿಯಲಿ
ಅನಾಮಿಕ ಆಸರೆಗೆ
ನಾನೇನೋ ಗೀಚುತ್ತೇನೆ!
ನಾನು ಬರೆಯುತ್ತೇನೆ...!!

~Geethalakshmi Kochi


Monday 29 January 2018

ಅನಿರ್ವಚನೀಯ

ಮಾತೆಲ್ಲ ಮರೆತು ಮೌನ-
ದೇವರಿಗೆ ಶರಣಾದೆ
ಭಾವ ದೀವಿಗೆ ಹಚ್ಚಿದೆ
ನನ್ನ ದೇವರು ಗರ್ಭಗುಡಿಯಿಂದ
ಹೊರಬಂದಂತಿದೆ
ಅರೆಬೆಳಕ ಹಾದಿಯಲಿ ಯಾರೋ
ಕೈ  ಹಿಡಿದು ನಡೆದಂತಿದೆ
ಕವಿತೆ ಒಲ್ಲೆ ಎಂದರೂ
ನವ್ಯ ನಲ್ಲೆಯಾದಂತಿದೆ


~Geethalakshmi Kochi

Sunday 31 December 2017

ಹದಿನೆಂಟರ ಹೊಸಿಲಿನಲಿ

ಹೊಸ ವರುಷಕ್ಕೆ ಅಕ್ಕ ಕೊಟ್ಟ ಡ್ರೆಸ್ ನೋಡಿ ಮುಗುಳ್ನಗೆ ಮೂಡಿತು.ಅದನ್ನು ಧರಿಸಿ ಕನ್ನಡಿಯನ್ನೆದುರಿಸಿದೆ."ನಿನ್ನ ಬಟ್ಟೆಯಷ್ಟೇ ಹೊಸತು,ಆಂತರ್ಯದಲ್ಲೆಲ್ಲಿದೆ ಹೊಸತನ" ಎಂದು ಕನ್ನಡಿಯ ಕುಹಕ.
           ನಾನು ಯೋಚನಾಮಗ್ನಳಾದೆ.೨೦೧೭ರ ಕೊನೆಯ ಸೂರ್ಯ ಅಸ್ತಮಿಸ ಹೊರಟಿದ್ದಾನೆ.ಮನೆ-ಮನಗಳಲ್ಲಿ ಅವನನ್ನು ಬೀಳ್ಕೊಡುವ ಆತುರ.ಹೊಸ ವರ್ಷ ಹೊಸಿಲು ದಾಟುವ ಕಾತರ.ಈ ಆತುರ ಕಾತರಗಳಿಗೆ ಬದಲಾವಣೆಯ ತುಡಿತ. ಮನಸ್ಸು ಮರುಳಾಯಿತು. ಒಂದೇ ಪ್ರಶ್ನೆ ಕಾಡಿತು."ಕ್ಯಾಲೆಂಡರ್ ಬಿಟ್ಟು ಇನ್ನೇನು ಬದಲಾಗುತ್ತದೆ?"
                     ಮನೆಯ ಹೊರಗೂ ಅರೆಬೆಳಕು;ಮನದೊಳಗೂ ಅರೆಬೆಳಕು..ನನ್ನೊಳಗಿನ ಬೆಳಕು ಮಾತನಾಡತೊಡಗಿತು.
                              "ನಿಜ.ನಾಳೆಯೂ, ಅದೇ ಭೂಮಿ;ಅದೇ ಬಾನು. ಅದೇ ನೀನು; ಅದೇ ನಾನು. ಅದೇ ಬೆಳಕು; ಅದೇ ಇರುಳು. ಇದನ್ನೆಲ್ಲ ನೋಡುವುದೂ ಇದೇ ಕಣ್ಣುಗಳು.
ಆದರೆ ದೃಷ್ಟಿಕೋನ ಹೊಸತಾಗಬಹುದಲ್ಲ...

ಎಲೆಯ ಚಿಗುರಿನಲ್ಲಿ ಹಸಿರಷ್ಟೇ ಅಲ್ಲ; ಹಾರೈಕೆ ಕಂಡೀತು
ಕೆಂಪು ಬಣ್ಣದಲ್ಲಿ ರಕ್ತವಲ್ಲ;
 ಪ್ರೀತಿ ಮಿಡಿದೀತು
ಉರಿವ ಹಣತೆ ಬೆಳಕಷ್ಟೇ ಅಲ್ಲ;
ಹೊಳಪು ತಂದೀತು
ನಾಳಿನ ಬೆಳಗು ವಾಸ್ತವದಲ್ಲಿ:
ಬೆಳಕಾದೀತು....

ಹೊಸ ವರ್ಷದ ಶುಭಾಶಯಗಳು!!


~Geethalakshmi Kochi

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...