Sunday 31 December 2017

ಹದಿನೆಂಟರ ಹೊಸಿಲಿನಲಿ

ಹೊಸ ವರುಷಕ್ಕೆ ಅಕ್ಕ ಕೊಟ್ಟ ಡ್ರೆಸ್ ನೋಡಿ ಮುಗುಳ್ನಗೆ ಮೂಡಿತು.ಅದನ್ನು ಧರಿಸಿ ಕನ್ನಡಿಯನ್ನೆದುರಿಸಿದೆ."ನಿನ್ನ ಬಟ್ಟೆಯಷ್ಟೇ ಹೊಸತು,ಆಂತರ್ಯದಲ್ಲೆಲ್ಲಿದೆ ಹೊಸತನ" ಎಂದು ಕನ್ನಡಿಯ ಕುಹಕ.
           ನಾನು ಯೋಚನಾಮಗ್ನಳಾದೆ.೨೦೧೭ರ ಕೊನೆಯ ಸೂರ್ಯ ಅಸ್ತಮಿಸ ಹೊರಟಿದ್ದಾನೆ.ಮನೆ-ಮನಗಳಲ್ಲಿ ಅವನನ್ನು ಬೀಳ್ಕೊಡುವ ಆತುರ.ಹೊಸ ವರ್ಷ ಹೊಸಿಲು ದಾಟುವ ಕಾತರ.ಈ ಆತುರ ಕಾತರಗಳಿಗೆ ಬದಲಾವಣೆಯ ತುಡಿತ. ಮನಸ್ಸು ಮರುಳಾಯಿತು. ಒಂದೇ ಪ್ರಶ್ನೆ ಕಾಡಿತು."ಕ್ಯಾಲೆಂಡರ್ ಬಿಟ್ಟು ಇನ್ನೇನು ಬದಲಾಗುತ್ತದೆ?"
                     ಮನೆಯ ಹೊರಗೂ ಅರೆಬೆಳಕು;ಮನದೊಳಗೂ ಅರೆಬೆಳಕು..ನನ್ನೊಳಗಿನ ಬೆಳಕು ಮಾತನಾಡತೊಡಗಿತು.
                              "ನಿಜ.ನಾಳೆಯೂ, ಅದೇ ಭೂಮಿ;ಅದೇ ಬಾನು. ಅದೇ ನೀನು; ಅದೇ ನಾನು. ಅದೇ ಬೆಳಕು; ಅದೇ ಇರುಳು. ಇದನ್ನೆಲ್ಲ ನೋಡುವುದೂ ಇದೇ ಕಣ್ಣುಗಳು.
ಆದರೆ ದೃಷ್ಟಿಕೋನ ಹೊಸತಾಗಬಹುದಲ್ಲ...

ಎಲೆಯ ಚಿಗುರಿನಲ್ಲಿ ಹಸಿರಷ್ಟೇ ಅಲ್ಲ; ಹಾರೈಕೆ ಕಂಡೀತು
ಕೆಂಪು ಬಣ್ಣದಲ್ಲಿ ರಕ್ತವಲ್ಲ;
 ಪ್ರೀತಿ ಮಿಡಿದೀತು
ಉರಿವ ಹಣತೆ ಬೆಳಕಷ್ಟೇ ಅಲ್ಲ;
ಹೊಳಪು ತಂದೀತು
ನಾಳಿನ ಬೆಳಗು ವಾಸ್ತವದಲ್ಲಿ:
ಬೆಳಕಾದೀತು....

ಹೊಸ ವರ್ಷದ ಶುಭಾಶಯಗಳು!!


~Geethalakshmi Kochi

3 comments:

  1. Hosa varushada shubhashaygalu putta. Kavana tumba channagide

    ReplyDelete
  2. Awesome.... ಕೊನೆಯ ಸಾಲುಗಳು ಅದ್ಭುತ !!

    ReplyDelete

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...